Asianet Suvarna News Asianet Suvarna News

ಶ್ರೀಲಂಕಾ ಫಿಕ್ಸಿಂಗ್‌ ತಡೆಗಟ್ಟಲು ಪ್ರಧಾನಿ ಮೋದಿ ನೆರವು!

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಮುಕ್ತ ಮಾಡಲು ಲಂಕಾ ಕ್ರಿಕೆಟ್ ಮಂಡಳಿ ಹೋರಾಟ ಆರಂಭಿಸಿದೆ. ಇದಕ್ಕಾಗಿ ಶ್ರೀಲಂಕಾ ಭಾರತದ ನೆರವು ಕೇಳಿತ್ತು. ತಕ್ಷಣವೇ ಸ್ಪಂದಿಸಿದಿ ಪ್ರಧಾನಿ ಮೋದಿ ಲಂಕಾಗೆ ಅಗತ್ಯ ನೆರವುಗಳನ್ನ ಮಾಡಿದ್ದಾರೆ.
 

Sri Lanka seeks Indian help to tackle match-fixing
Author
Bengaluru, First Published Oct 23, 2018, 8:45 AM IST
  • Facebook
  • Twitter
  • Whatsapp

ಕೊಲಂಬೊ(ಅ.23): ಫಿಕ್ಸಿಂಗ್‌ ಭೂತ ಶ್ರೀಲಂಕಾ ಕ್ರಿಕೆಟ್‌ ಬೆನ್ನೇರಿದ್ದು ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಇಲ್ಲಿನ ಕ್ರಿಕೆಟ್‌ ಮಂಡಳಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌, ಪಿಚ್‌ ಫಿಕ್ಸಿಂಗ್‌ ಹೀಗೆ ಹಲವು ರೀತಿಯ ಭ್ರಷ್ಟಾಚಾರ ಲಂಕಾ ಕ್ರಿಕೆಟನ್ನ ಪಾತಾಳಕ್ಕೆ ತಳ್ಳಿದ್ದು, ಇದರಿಂದ ಮೇಲೇಳಲು ಲಂಕಾ ಭಾರತದ ಸಹಾಯ ಕೋರಿದೆ.

ಸದ್ಯ ಐಸಿಸಿ ನಡೆಸುತ್ತಿರುವ ಮ್ಯಾಚ್‌ ಫಿಕ್ಸಿಂಗ್‌ ತನಿಖೆಯನ್ನು ಎದುರಿಸಲು, ತನಿಖೆಗೆ ಅಗತ್ಯವಿರುವ ಪೂರಕ ದಾಖಲೆಗಳನ್ನು ಒದಗಿಸಲು, ಭ್ರಷ್ಟರನ್ನು ಹೊರತರಲು ಲಂಕಾಗೆ ಭಾರತದ ಸೆಂಟ್ರಲ್‌ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌ (ಸಿಬಿಐ) ತಾಂತ್ರಿಕ ಸಲಹೆಗಳನ್ನು ನೀಡಲಿದೆ.

ಮೋದಿ ಸಹಾಯ: ಶ್ರೀಲಂಕಾದ ವಿಶ್ವಕಪ್‌ ವಿಜೇತ ನಾಯಕ, ಲಂಕಾದ ಹಾಲಿ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಫಿಕ್ಸಿಂಗ್‌ ತಡೆಗಟ್ಟಲು ಭಾರತದ ನೆರವು ಕೋರಿದ್ದರು. ಇದು ತಮ್ಮ ಗಮನಕ್ಕೆ ಬಂದ ಕೂಡಲೇ, ಭಾರತದ ಪ್ರಧಾನಿ ನರೇಂದ್ರ ಮೋದಿ, ರಣತುಂಗಗೆ ಸಿಬಿಐನೊಂದಿಗೆ ಸಂಪರ್ಕ ಕಲ್ಪಿಸಿದ್ದಾರೆ. ನವದೆಹಲಿಗೆ ಆಗಮಿಸಿ ತಮಗೆ ಅಗತ್ಯವಿರುವ ನೆರವಿನ ಬಗ್ಗೆ ಮನವಿ ಸಲ್ಲಿಸಿ ಲಂಕಾಗೆ ಹಿಂದಿರುಗಿದ ರಣತುಂಗ, ಸೋಮವಾರ ಕೊಲಂಬೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಫಿಕ್ಸಿಂಗ್‌ ವಿರುದ್ಧ ಹೋರಾಡಲು ನಮ್ಮಲ್ಲಿ ಪರಿಣಿತಿ ಇಲ್ಲ. ಸಮಸ್ಯೆಯನ್ನು ಎದುರಿಸಲು ಸೂಕ್ತ ಕಾನೂನು ಸಹ ಇಲ್ಲ. ಹೀಗಾಗಿ ಭ್ರಷ್ಟಾಚಾರ ತಡೆಗಟ್ಟಲು ಭಾರತ ನಮಗೆ ನೆರವು ನೀಡುವ ಭರವಸೆ ನೀಡಿದೆ’ ಎಂದು ರಣತುಂಗ ಹೇಳಿದರು.

ಭಾರತದಿಂದಲೇ ಕಾನೂನು ರಚನೆ!: ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದವರ ವಿರುದ್ಧ ಕೈಗೊಳ್ಳಲು ಶ್ರೀಲಂಕಾದಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಇಲ್ಲ. ಇದು ಆಶ್ಚರ್ಯ ಮೂಡಿಸಿದರೂ ಸತ್ಯ. ಹೀಗಾಗಿ, ಭಾರತವೇ ಕಾನೂನು ರಚನೆಗೂ ನೆರವು ನೀಡುವುದಾಗಿ ಭರವಸೆ ನೀಡಿದೆ. ಶೀಘ್ರದಲ್ಲೇ ಸಿಬಿಐನಿಂದ ಲಂಕಾ ಅಧಿಕಾರಿಗಳಿಗೆ ತಾಂತ್ರಿಕ ಸಲಹೆ ಹಾಗೂ ಕಾನೂನು ರಚನೆಯಾಗಲಿದೆ ಎಂದು ರಣತುಂಗ ಹೇಳಿದ್ದಾರೆ.

ಮೇ ತಿಂಗಳಲ್ಲಿ ಲಂಕಾ ಕ್ರಿಕೆಟ್‌ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಖಾಸಗಿ ಸುದ್ದಿ ವಾಹಿನಿಯೊಂದು ಬಯಲಿಗೆಳೆದಿತ್ತು. ಗಾಲೆ ಮೈದಾನದ ಸಿಬ್ಬಂದಿ ತರಂಗ ಇಂಡಿಕಾ ಹಾಗೂ ವೃತ್ತಿಪರ ಕ್ರಿಕೆಟಿಗ ತರಿಂಡು ಮೆಂಡಿಸ್‌ ಪಿಚ್‌ ಫಿಕ್ಸಿಂಗ್‌ ನಡೆಸಲು ಒಪ್ಪಿಕೊಂಡಿದ್ದು ಬಹಿರಂಗಗೊಂಡಿತ್ತು. ಇಂಗ್ಲೆಂಡ್‌ ವಿರುದ್ಧ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯಗೊಳ್ಳುವಂತೆ ಪಿಚ್‌ ನಿರ್ಮಿಸಲು ವ್ಯವಹಾರ ನಡೆಸಲಾಗಿತ್ತು. ಪ್ರಕರಣದ ತನಿಖೆಯನ್ನು ಐಸಿಸಿ ಕೈಗೆತ್ತಿಕೊಂಡ ಬಳಿಕ ಲಂಕಾ ಕ್ರಿಕೆಟ್‌ ಸಂಸ್ಥೆ ಈ ಇಬ್ಬರನ್ನು ಅಮಾನತುಗೊಳಿಸಿತು. ಇದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸನತ್‌ ಜಯಸೂರ್ಯ ವಿರುದ್ಧವೂ ಐಸಿಸಿ ತನಿಖೆ ನಡೆಸುತ್ತಿದೆ. ತನಿಖೆಗೆ ಸಹಕರಿಸುತ್ತಿಲ್ಲ ಎಂದು ಜಯಸೂರ್ಯ ವಿರುದ್ಧ ಐಸಿಸಿ ಇತ್ತೀಚೆಗೆ ಆರೋಪಿಸಿತ್ತು. ಸಮಸ್ಯೆಯ ಮೇಲೆ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ಭಾರತದ ನೆರವು ಕೋರಿರುವುದರಲ್ಲಿ ಆಶ್ಚರ್ಯವಿಲ್ಲ.

ವಿಶೇಷ ಪೊಲೀಸ್‌ ತಂಡ: ಭ್ರಷ್ಟಾಚಾರ ನಡೆಸುವವರನ್ನು ಪತ್ತೆ ಹಚ್ಚಲು ಹಾಗೂ ಮಾಹಿತಿ ಹೊರತೆಗೆಯಲು ಲಂಕಾದಲ್ಲಿ ವಿಶೇಷ ಪೊಲೀಸ್‌ ತಂಡ ರಚನೆ ಮಾಡುವುದಾಗಿ ಅರ್ಜುನ ರಣತುಂಗ ತಿಳಿಸಿದ್ದಾರೆ. ಈ ತಂಡಕ್ಕೂ ಭಾರತದಿಂದ ತರಬೇತಿ ಸಿಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios