ಕೊಲೊಂಬೊ(ಅ.31): ಕ್ರಿಕೆಟ್‌ನಿಂದ ಫಿಕ್ಸಿಂಗ್ ದೂರವಿಡಲು ಐಸಿಸಿ ಅವಿರತ ಪ್ರಯತ್ನ ಮಾಡುತ್ತಿದ್ದರೂ ಮತ್ತೆ ಮತ್ತೆ ಆರೋಪಗಳು ಕೇಳಿಬರುತ್ತಿದೆ. ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಶ್ರೀಲಂಕಾ ಬೌಲಿಂಗ್ ಕೋಚ್ ನುವಾನ್ ಜೋಯ್ಸಾ ಅಮಾನತ್ತಾಗಿದ್ದಾರೆ.

ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 90 ಏಕದಿನ ಪಂದ್ಯ ಆಡಿರುವ ನುವಾನ್ ಜೋಯ್ಸಾ, ಲಂಕಾ ತಂಡ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜೋಯ್ಸಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಗಂಭೀರ ಆರೋಪ ಕೇಳಿಬಂದಿದೆ. ಅಂತಾರಾಷ್ಟ್ರೀಯ ಪಂದ್ಯವನ್ನ ಫಿಕ್ಸ್ ಮಾಡಿದ, ಆಟಗಾರರನ್ನ ಫಿಕ್ಸಿಂಗ್‌ಗೆ ಪ್ರಚೋದನೆ ಮಾಡಿದ ಹಾಗೂ ಫಿಕ್ಸಿಂಗ್‌ಗೆ ಅನುವು ಮಾಡಿಕೊಟ್ಟ ಆರೋಪದಡಿ ಜೋಯ್ಸಾ ಅವರನ್ನ ಐಸಿಸಿ ಅಮಾನತು ಮಾಡಿದೆ.

 

 

ನವೆಂಬರ್ 1 ರಿಂದ 14 ದಿನಗಳವರೆಗೆ ಜೋಯ್ಸಾ ಅವರಿಗೆ ಉತ್ತರಿಸಲು ಸಮಯವಕಾಶ ನೀಡಿದೆ. ಶ್ರೀಲಂಕಾ ಕ್ರಿಕೆಟ್ ಮೇಲೆ ಕೇಳಿಬಂದಿರು ಫಿಕ್ಸಿಂಗ್ ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆ ನಡೆಸುತ್ತಿದೆ.

ತನಿಖೆಗೆ ಸಹಕರಿಸಿದ ಮಾಜಿ ನಾಯಕ ಸನತ್ ಜಯಸೂರ್ಯಗೆ ಐಸಿಸಿ ಖಡಕ್ ಎಚ್ಚರಿಕೆಯನ್ನ ನೀಡಿತ್ತು. ಇದೀಗ ಬೌಲಿಂಗ್ ಕೋಚ್ ಅಮಾನತಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.