ವೆಲ್ಲಿಂಗ್ಟನ್[ಜು.19]: ಇಂಗ್ಲೆಂಡ್ ವಿಶ್ವಕಪ್ ಗೆಲುವಿನ ರೂವಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದರ ಜತೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡಾ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ.

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಜೇಯ 84 ರನ್ ಬಾರಿಸುವ ಮೂಲಕ ಪಂದ್ಯ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೇ ಸೂಪರ್ ಓವರ್’ನಲ್ಲೂ ಬೌಂಡರಿ ಬಾರಿಸುವ ಮೂಲಕ 15 ರನ್ ಆಗುವಂತೆ ಮಾಡಿದ್ದರು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೂಡಾ 15 ರನ್ ಬಾರಿಸಿತು. ಅಂತಿಮವಾಗಿ ಅತಿ ಹೆಚ್ಚು ಬೌಂಡರಿ ಬಾರಿಸಿದ್ದ ಆದಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

ನ್ಯೂಜಿಲೆಂಡ್’ನಲ್ಲಿ ಜನಿಸಿದ ಬೆನ್ ಸ್ಟೋಕ್ಸ್, 12 ವರ್ಷದವರಿದ್ದಾಗ ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್’ಗೆ ತೆರಳಿದ್ದರು. ಸ್ಟೋಕ್ಸ್ ತಂದೆ ಗಿರಾರ್ಡ್ ರಗ್ಬಿ ಆಟಗಾರರಾಗಿದ್ದು, ಇಂಗ್ಲೆಂಡ್ ತಂಡದ ಕೋಚ್ ಆಗಲು ಅಲ್ಲಿಗೆ ತೆರಳಿದ್ದರು. ಆ ಬಳಿಕ ತಂದೆ ಗಿರಾರ್ಡ್ ಹಾಗೂ ಹಾಗು ಡೆಬ್ ವಾಪಾಸ್ ನ್ಯೂಜಿಲೆಂಡ್’ಗೆ ಮರಳಿ ಕ್ರಿಸ್ಟ್’ಚರ್ಚ್’ನಲ್ಲಿ ಜೀವನ ಮುಂದುವರೆಸಿದರು. ಆದರೆ ಬೆನ್ ಸ್ಟೋಕ್ಸ್ ಮಾತ್ರ ಇಂಗ್ಲೆಂಡ್’ನಲ್ಲೇ ಉಳಿದರು.

ಸ್ಟೋಕ್ಸ್ ಅವರನ್ನು ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನ ಮಾಡಿರುವುದರ ಬಗ್ಗೆ ಮಾತನಾಡಿದ ಮುಖ್ಯ ತೀರ್ಪುಗಾರ ಕ್ಯಾಮರೋನ್ ಬೆನ್ನೆಟ್, ’ಸ್ಟೋಕ್ಸ್ ನ್ಯೂಜಿಲೆಂಡ್ ಪರ ಆಡದೇ ಇರಬಹುದು. ಆದರೆ ಅವರ ಪೋಷಕರು ವಾಸಿಸುತ್ತಿರುವ ಕ್ರಿಸ್ಟ್’ಚರ್ಚ್’ನಲ್ಲಿ ಬೆನ್ ಸ್ಟೋಕ್ಸ್ ಜನಿಸಿದ್ದು. ಅದಕ್ಕೆ ದೇಶದ ಕೆಲವರು ಸ್ಟೋಕ್ಸ್‌ನನ್ನು ನಮ್ಮವನೆ ಎಂದು ಭಾವಿಸುತ್ತಾರೆ ಎಂದಿದ್ದಾರೆ.