'ಲಕ್ಷಾಂತರ ಮಂದಿಯನ್ನು ಪ್ರಭಾವಿಸಿದ್ದಕ್ಕೆ ಥ್ಯಾಂಕ್ಯೂ': ಸಾನಿಯಾ ಮಿರ್ಜಾಗೆ ಹರಿದುಬಂತು ಅಭಿನಂದನೆಗಳ ಮಹಾಪೂರ
ವೃತ್ತಿಜೀವನದ ಕೊನೆಯ ಟೆನಿಸ್ ಗ್ರ್ಯಾನ್ ಸ್ಲಾಂ ಪಂದ್ಯವನ್ನಾಡಿದ ಸಾನಿಯ ಮಿರ್ಜಾ
ಟೆನಿಸ್ ವೃತ್ತಿಜೀವನದಲ್ಲಿ 6 ಗ್ರ್ಯಾನ್ ಸ್ಲಾಂ ಜಯಿಸಿರುವ ಮೂಗುತಿ ಸುಂದರಿ
ಸಾನಿಯಾ ಮಿರ್ಜಾ ವಿದಾಯಕ್ಕೆ ಶುಭಕೋರಿದ ಕ್ರೀಡಾತಾರೆಯರು
ಮೆಲ್ಬರ್ನ್(ಜ.27): ಭಾರತದ ದಿಗ್ಗಜ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತಮ್ಮ ಟೆನಿಸ್ ವೃತ್ತಿಜೀವನದ ಕಟ್ಟಕಡೆಯ ಟೆನಿಸ್ ಗ್ರ್ಯಾನ್ ಸ್ಲಾಂ ಆಡಿ ನಿರ್ಗಮಿಸಿದ್ದಾರೆ. ತಮ್ಮ ಬಹುಕಾಲ ಬೆಸ್ಟ್ ಫ್ರೆಂಡ್ ಹಾಗೂ ಸಹ ಆಟಗಾರ ರೋಹನ್ ಬೋಪಣ್ಣ ಜತೆಗೆ ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ಪಂದ್ಯವನ್ನಾಡಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸಾನಿಯಾ ಮಿರ್ಜಾ ಅವರ ಮೊದಲ ಮಿಶ್ರ ಡಬಲ್ಸ್ ಆಟಗಾರರಾಗಿದ್ದ ರೋಹನ್ ಬೋಪಣ್ಣ, ಇದೀಗ ಕೊನೆಯ ಪಾರ್ಟ್ನರ್ ಆಗಿಯೂ ಕಣಕ್ಕಿಳಿದು, ಫೈನಲ್‌ನಲ್ಲಿ 6-7(2), 2-6 ಸೆಟ್‌ಗಳಿಂದ ಬ್ರೆಜಿಲ್‌ನ ಲೂಸಿಯಾ ಸ್ಟೆಫೆನಿ ಮತ್ತು ರಾಫೆಲ್ ಮಟೋಸ್ ಎದುರು ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸಾನಿಯಾ ಮಿರ್ಜಾ, "ನಾನೀಗ ಅಳುತ್ತಿದ್ದೇನೆ ಎಂದರೆ, ಅವು ಆನಂದ ಭಾಷ್ಪಗಳು. ಇದನ್ನು ಮೊದಲೇ ಹೇಳುತ್ತಿದ್ದೇನೆ. ನಾನು ಇನ್ನಷ್ಟು ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ಆದರೆ ನನ್ನ ವೃತ್ತಿಪರ ಟೆನಿಸ್ ಪಯಣ ಮೆಲ್ಬೊರ್ನ್‌ನಲ್ಲಿಯೇ ಕೊನೆಗೊಂಡಿದೆ ಎಂದು ಕಣ್ಣೀರಿಡುತ್ತಲೇ ವಿದಾಯದ ಮಾತುಗಳನ್ನಾಡಿದ್ದಾರೆ.
ರೋಹನ್ ನನ್ನ ಮೊಟ್ಟಮೊದಲ ಮಿಶ್ರ ಡಬಲ್ಸ್ ಜತೆಗಾರ. ನಾನು 14 ವರ್ಷದವರಾಗಿದ್ದಾಗ, ನಾವಿಬ್ಬರು ಸೇರಿ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದೇವು. ಇದಾಗಿ 22 ವರ್ಷಗಳೇ ಕಳೆದಿವೆ. ಇವರಿಗಿಂತ ಉತ್ತಮ ವ್ಯಕ್ತಿ ನನಗೆ ಅನಿಸುತ್ತಿಲ್ಲ. ಅವರು ನನ್ನ ಅತ್ಯುತ್ತಮ ಗೆಳೆಯ ಹಾಗೂ ಅತ್ಯುತ್ತಮ ಜತೆಗಾರನೊಂದಿಗೆ ನನ್ನ ವೃತ್ತಿ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜತೆಗೂಡಿ ಫ್ರೆಂಚ್ ಓಪನ್ ಮಿಶ್ರಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
Australian Open: ವೃತ್ತಿಜೀವನದ ಕೊನೇ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಸಾನಿಯಾ ಮಿರ್ಜಾ!
36 ವರ್ಷದ ಸಾನಿಯಾ ಮಿರ್ಜಾ, ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಡಬ್ಲ್ಯೂಟಿಎ ಟೂರ್ನಿಯು ತಮ್ಮ ಪಾಲಿನ ಕಟ್ಟ ಕಡೆಯ ಟೆನಿಸ್ ಟೂರ್ನಿಯಾಗಲಿದೆ ಎಂದು ಈಗಾಗಲೇ ಘೋಷಿಸಿದ್ದಾರೆ. ಭಾರತ ಕಂಡ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ, ಮಹಿಳಾ ಡಬಲ್ಸ್‌ನಲ್ಲಿ 3 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 3 ಸೇರಿದಂತೆ ಒಟ್ಟು 6 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ.
ಸಾನಿಯಾ ಮಿರ್ಜಾ ಅವರ ವಿದಾಯಕ್ಕೆ ಹಲವು ಕ್ರೀಡಾ ತಾರೆಯರು ಶುಭ ಕೋರಿದ್ದಾರೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಅದ್ಭುತ ವೃತ್ತಿಜೀವನ ನಡೆಸಿದ ಸಾನಿಯಾ ಮಿರ್ಜಾ ಅವರಿಗೆ ಅಭಿನಂದನೆಗಳು. ಭಾರತದ ಕ್ರೀಡೆಗೆ ಅಪಾರ ಕೊಡುಗೆ ನೀಡಿದ್ದರ ಜತೆಗೆ ಲಕ್ಷಾಂತರ ಹುಡುಗಿಯರು ಈ ಕ್ರೀಡೆಯನ್ನು ತೆಗೆದುಕೊಳ್ಳಲು ಪ್ರಭಾಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಅಭಿನವ್ ಬಿಂದ್ರಾ ಮಾತ್ರವಲ್ಲದೇ, ಮಿಥಾಲಿ ರಾಜ್, ಮೊಹಮ್ಮದ್ ಅಜರುದ್ದೀನ್, ಶ್ರೇಯಸ್ ಅಯ್ಯರ್, ಹರ್ಭಜನ್ ಸಿಂಗ್, ವಕಾರ್ ಯೂನಿಸ್ ಸೇರಿದಂತೆ ಹಲವು ಕ್ರೀಡಾತಾರೆಯರು ಸಾನಿಯಾ ಮಿರ್ಜಾ ಅವರಿಗೆ ಶುಭ ಕೋರಿದ್ದಾರೆ.