Australian Open: ವೃತ್ತಿಜೀವನದ ಕೊನೇ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಸಾನಿಯಾ ಮಿರ್ಜಾ!
ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟು, ಪ್ರಶಸ್ತಿಯ ನಿರೀಕ್ಷೆ ಇಟ್ಟಿದ್ದ ಸಾನಿಯಾ ಮಿರ್ಜಾಗೆ ನಿರಾಸೆಯಾಗಿದೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿದೆ. ಅದರೊಂದಿಗೆ ಸಾನಿಯಾ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಗೆ ವಿದಾಯ ಪ್ರಕಟಿಸಿದ್ದಾರೆ.
ಮೆಲ್ಬೋರ್ನ್ (ಜ.27): ಸಾನಿಯಾ ಮಿರ್ಜಾ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಂನಲ್ಲಿ ಸೋಲು ಕಂಡಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತರು. ಆಸ್ಟ್ರೇಲಿಯನ್ ಓಪನ್ ಟೂರ್ನಿ ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಂ ಟೂರ್ನಿ ಎಂದು ಸಾನಿಯಾ ಮಿರ್ಜಾ ಈಗಾಗಲೇ ಘೋಷಣೆ ಮಾಡಿದ್ದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2ನೇ ಸುತ್ತಿನಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದ ಸಾನಿಯಾ ಮಿರ್ಜಾ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರುವ ಮೂಲಕ ಪ್ರಶಸ್ತಿಯ ನಿರೀಕ್ಷೆ ಇಟ್ಟಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗೆಲುವಿನ ವಿದಾಯ ಹೇಳುವ ಸಾನಿಯಾ ಮಿರ್ಜಾ ಅವರ ಕನಸು ಭಗ್ನಗೊಂಡಿತು. ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ 6-7. 2-6 ರಿಂದ ಬ್ರೆಜಿಲ್ ಜೋಡಿ ಲೂಯಿಸಾ ಸ್ಟೆಫಾನಿ ಹಾಗೂ ರಾಫೆಲ್ ಮಾಟೋಸ್ ಜೋಡಿಗೆ ಶರಣಾಯಿತು.
ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದಲ್ಲಿ ಮೂರು ಮಹಿಳಾ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬೋಪಣ್ಣ ಒಂದು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ಭಾರತದ ಶ್ರೇಯಾಂಕ ರಹಿತ ಜೋಡಿ ಸಾನಿಯಾ ಮತ್ತು ಬೋಪಣ್ಣ 7-6(5), 6-7(5), 10-6 ಸೆಟ್‌ಗಳಿಂದ ಡಿಸೈರಿಯಾ ಕ್ರಾವ್‌ಜಿಕ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದರು. ಈ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ವಾಕ್‌ಓವರ್ ಪಡೆದುಕೊಂಡಿತ್ತು. ಭಾರತದ ಜೋಡಿಯು ಉರುಗ್ವೆ ಮತ್ತು ಜಪಾನ್‌ನ ಏರಿಯಲ್ ಬೆಹರ್ ಮತ್ತು ಮಕಾಟೊ ನಿನೋಮಿಯಾ ಜೋಡಿಯನ್ನು 6-4, 7-6 (11-9) ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿತ್ತು.
ಫೈನಲ್ ಪಂದ್ಯಕ್ಕೂ ಮುನ್ನ ಸಾನಿಯಾ ಹಾಗೂ ರೋಹನ್ ಬೋಪಣ್ಣ ಜೋಡಿ ಕೇವಲ ಒಂದೇ ಒಂದು ಸೆಟ್‌ನಲ್ಲಿ ಮಾತ್ರವೇ ಸೋಲು ಕಂಡಿದ್ದರು. ಫೈನಲ್ ಪಂದ್ಯದಲ್ಲೂ ಕೂಡ ಒಂದು ಸೆಟ್‌ನಲ್ಲಿ ತೀರಾ ಅಲ್ಪ ಅಂತರದಲ್ಲಿ ಸೋಲು ಕಂಡಿದ್ದರು. ಆದರೆ, ಮೊದಲ ಸೆಟ್‌ನಲ್ಲಿ ಸೋಲು ಕಂಡ ಬಳಿಕ, 2ನೇ ಸೆಟ್‌ನಲ್ಲೂ ನೀರಸವಾಗಿ ಆಡಿದ್ದರಿಂದ ಭಾರತದ ಜೋಡಿ ಫೈನಲ್‌ನಲ್ಲಿ ನೇರ ಸೆಟ್ ಸೋಲು ಕಂಡಿತು. ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಡ್ಬನ್ ಜೋಡಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದರೆ, ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ಕಜಾಕಿಸ್ತಾನದ ಅನ್ನಾ ಡನ್ನಿಲಿನಾ ಜೋಡಿ 2ನೇ ಸುತ್ತಿನಲ್ಲಿ ಸೋಲು ಕಂಡಿತ್ತು.
Australian Open 2023: ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಂಗೂ ಮುನ್ನ ಸಾನಿಯಾ ಭಾವುಕ ಪತ್ರ
ಸಾನಿಯಾ ತಮ್ಮ ವೃತ್ತಿ ಜೀವನದಲ್ಲಿ 43 ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2016 ರಲ್ಲಿ, ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳೆಯರ ಡಬಲ್ಸ್ ಚಾಂಪಿಯನ್ ಆಗಿದ್ದರು. ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಮೂರು ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ.
ಟೆನಿಸ್ಗೆ ಸಾನಿಯಾ ಮಿರ್ಜಾ ವಿದಾಯ! ದುಬೈನಲ್ಲಿ ಕಟ್ಟ ಕಡೆಯ ಬಾರಿಗೆ ಕಣಕ್ಕಿಳಿಯೋ ಮೂಗುತಿ ಸುಂದರಿ
2009 ರಲ್ಲಿ, ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಈ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದರು. ಮಹಿಳೆಯರ ಡಬಲ್ಸ್ ಶ್ರೇಯಾಂಕದಲ್ಲಿ ಸಾನಿಯಾ ದೀರ್ಘಕಾಲ ನಂಬರ್ ಒನ್ ಸ್ಥಾನದಲ್ಲಿದ್ದರು. ಆದರೆ, ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಗೆಲುವಿನಿಂದ ಒಂದು ಹೆಜ್ಜೆ ದೂರ ಉಳಿದಿದ್ದರು.
'ನನ್ನ ವೃತ್ತಿಪರ ಟೆನಿಸ್ ಅರಂಭವಾಗಿದ್ದು ಮೆಲ್ಬೋರ್ನ್‌ನಲ್ಲಿ. 2005ರಲ್ಲಿ ನಾನು ಇಲ್ಲಿ ಸೆರೇನಾ ವಿಲಿಯಮ್ಸ್‌ರನ್ನು ಮೂರನೇ ಸುತ್ತಿನಲ್ಲಿ ಎದುರಿಸಿದ್ದೆ. ಆಗ ನನಗೆ 18 ವರ್ಷ. 18 ವರ್ಷಗಳ ಹಿಂದಿ ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಇಲ್ಲಿಗೆ ಬಂದು ಸಾಕಷ್ಟು ಉತ್ತಮ ಟೆನಿಸ್ ಆಡಿ, ಕೆಲವೊಂದು ಪ್ರಶಸ್ತಿ ಗೆದ್ದಿದ್ದಕ್ಕೆ ನನಗೆ ಬಹಳ ಸಂಭ್ರಮವಿದೆ. ರಾಡ್ ಲೆವರ್ ಅರೇನಾ ಎನ್ನುವುದು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುತ್ತದೆ. ನನ್ನ ಗ್ರ್ಯಾಂಡ್ ಸ್ಲಾಂ ವೃತ್ತಿಜೀವನ ಕೊನೆ ಮಾಡಲು ಇದಕ್ಕಿಂತ ಉತ್ತಮ ಕ್ರೀಡಾಂಗಣವಿಲ್ಲ' ಎಂದು ಸಾನಿಯಾ ಮಿರ್ಜಾ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೇಳಿದ್ದಾರೆ.