ಇದೇ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವು ಕೇವಲ ಮೂರೇ ದಿನಗಳಲ್ಲಿ ಮುಕ್ತಾಯ ಕಂಡಿತ್ತು. ಕಳೆದ ವರ್ಷ ದ.ಆಫ್ರಿಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ 108 ರನ್ ಗೆಲುವು ಕಂಡಿತ್ತು. ಅಶ್ವಿನ್ ಮತ್ತು ಜಡೇಜಾ ತಲಾ 8 ವಿಕೆಟ್ ಗಳಿಸಿದ್ದರು. ಒಟ್ಟಾರೆ ಈ ಪಂದ್ಯದಲ್ಲಿ 40 ವಿಕೆಟ್‌ಗಳ ಪೈಕಿ 34 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಬಾಚಿದ್ದರು.
ಮೊಹಾಲಿ(ನ.25): ರಾಜ್'ಕೋಟ್ ಟೆಸ್ಟ್ ಪಂದ್ಯದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಫಲಪ್ರದವಾದ ಭಾರತ, ಬಳಿಕ ವಿಶಾಖಪಟ್ಟಣದಲ್ಲಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ವಿತೀಯ ಆಟವಾಡುವುದರೊಂದಿಗೆ 246 ರನ್ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಪ್ರವಾಸಿ ಇಂಗ್ಲೆಂಡ್ ಮೇಲಿನ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು ಸಜ್ಜಾಗಿದೆ.
ಅದಕ್ಕೆ ಪೂರಕವಾಗಿ ಸ್ಪಿನ್ನರ್ ಸ್ನೇಹಿಯಾಗಿರುವ ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದಲ್ಲಿ ನಾಳೆಯಿಂದ ಆರಂಭವಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯವು ಆಂಗ್ಲರಿಗೆ ಮತ್ತೊಂದು ವಿಧದ ಪರೀಕ್ಷೆಯನ್ನು ತಂದೊಡ್ಡಿದೆ. ಐದು ಪಂದ್ಯ ಸರಣಿಯಲ್ಲಿ 2-0 ಮುನ್ನಡೆ ಪಡೆಯಲು ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ತುಡಿಯುತ್ತಿದೆ.
ಇದೇ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವು ಕೇವಲ ಮೂರೇ ದಿನಗಳಲ್ಲಿ ಮುಕ್ತಾಯ ಕಂಡಿತ್ತು. ಕಳೆದ ವರ್ಷ ದ.ಆಫ್ರಿಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ 108 ರನ್ ಗೆಲುವು ಕಂಡಿತ್ತು. ಅಶ್ವಿನ್ ಮತ್ತು ಜಡೇಜಾ ತಲಾ 8 ವಿಕೆಟ್ ಗಳಿಸಿದ್ದರು. ಒಟ್ಟಾರೆ ಈ ಪಂದ್ಯದಲ್ಲಿ 40 ವಿಕೆಟ್ಗಳ ಪೈಕಿ 34 ವಿಕೆಟ್ಗಳನ್ನು ಸ್ಪಿನ್ನರ್ಗಳೇ ಬಾಚಿದ್ದರು. ಕಳೆದ ವಿಶಾಖಪಟ್ಟಣ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜಾ ಮತ್ತು ಜಯಂತ್ ಯಾದವ್ ಪ್ರವಾಸಿಗರನ್ನು ಸ್ಪಿನ್ ಸುಳಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತದೇ ಸ್ಪಿನ್ ತಂತ್ರದಲ್ಲಿ ಆಂಗ್ಲರನ್ನು ಹಣಿಯಲು ಕೊಹ್ಲಿ ಪಡೆಗೆ ಸ್ಪಿನ್ ಸ್ನೇಹಿ ಪಿಚ್ ಅನ್ನು ಅಣಿಗೊಳಿಸಲಾಗಿದೆ. ಮೇಲಾಗಿ ಈ ಮೈದಾನದಲ್ಲಿ ಭಾರತ 1994ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಅನುಭವಿಸಿದ ಸೋಲಿನ ನಂತರ ಒಮ್ಮೆಯೂ ಹಿನ್ನಡೆ ಕಂಡಿಲ್ಲ. ಅಲ್ಲಿಂದಾಚೆಗಿನ ಹನ್ನೊಂದು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಮತ್ತು ಐದು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.
ಟಾಸ್ ನಿರ್ಣಾಯಕ
ತವರಿನಲ್ಲಿ ಭಾರತದ ದಿಗ್ವಿಜಯಕ್ಕೆ ಟಾಸ್ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ತವರಿನಲ್ಲಿ ನಡೆದ ಟೆಸ್ಟ್ಗಳ ಪೈಕಿ ಭಾರತ 15ರಲ್ಲಿ ಟಾಸ್ ಗೆದ್ದಿದೆ. ಈ ಹದಿನೈದು ಬಾರಿಯೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಅದು, 11ರಲ್ಲಿ ಗೆಲುವು ಸಾಧಿಸಿದೆ. ಮೊದಲ ದಿನ ಭಾರತೀಯ ಪಿಚ್'ಗಳು ಬ್ಯಾಟಿಂಗ್ ಸ್ನೇಹಿಯಾಗಿರುತ್ತದೆ ಎಂಬುದಕ್ಕೆ ಪೂರಕವಾಗಿ ಎಂಬಂತೆ ರಾಜ್ಕೋಟ್ ಟೆಸ್ಟ್ನಲ್ಲಿ ಭಾರತ ಟಾಸ್ ಕಳೆದುಕೊಂಡಿದ್ದರಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿದ್ದು ನಿದರ್ಶನವಾಗಿತ್ತು. ಇನ್ನು, ವಿಶಾಖಪಟ್ಟಣದಲ್ಲಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ, ಉತ್ತಮ ಮೊತ್ತ ಕಲೆಹಾಕಿತ್ತು. ಈ ಹಿನ್ನೆಲೆಯಲ್ಲಿಯೇ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿದೇಶಿ ತಂಡಗಳಿಗೆ ಟಾಸ್ ರಹಿತ ಆಯ್ಕೆ ಆದ್ಯತೆ ನೀಡಬೇಕೆಂದು ವಾದಿಸುತ್ತಿದ್ದರು.
ದಾಖಲೆ ಸಮೀಪ ಕುಕ್-ಕೊಹ್ಲಿ
ಇತ್ತಂಡಗಳ ನಾಯಕರುಗಳಾದ ವಿರಾಟ್ ಕೊಹ್ಲಿ ಮತ್ತು ಅಲಸ್ಟೇರ್ ಕುಕ್ ಈ ಪಂದ್ಯದಲ್ಲಿ ದಾಖಲೆ ಬರೆಯಲು ಸಿದ್ಧವಾಗಿದ್ದಾರೆ. ಪ್ರಚಂಡ ಫಾರ್ಮ್ನಲ್ಲಿರುವ ಕೊಹ್ಲಿ ಇನ್ನು 109 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ ಪೂರೈಸಲಿದ್ದು, ಅದೇ ಇಂಗ್ಲೆಂಡ್ ನಾಯಕ ಕುಕ್ ಸಾಂಪ್ರದಾಯಿಕ ಟೆಸ್ಟ್ನಲ್ಲಿ 11 ಸಹಸ್ರ ರನ್ ಪೂರೈಸಲು ಬೇಕಿರುವುದು 105 ರನ್ಗಳಷ್ಟೆ. ಈ ಪಂದ್ಯದಲ್ಲೇನಾದರೂ ಕುಕ್ ಇದನ್ನು ಸಾಧಿಸಿದರೆ, ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿಯೂ ಕೊಹ್ಲಿ ಹಾಗೂ ಕುಕ್ ದಿಟ್ಟ ಆಟವಾಡಿದ್ದು, ಈ ದಾಖಲೆ ಬರೆಯುವುದು ಬಹುತೇಕ ಖಚಿತವೆನಿಸಿದೆ.
ಸಂಭವನೀಯರ ಪಟ್ಟಿ
ಭಾರತ
ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್ (ವಿಕೆಟ್ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮದ್ ಶಮಿ.
ಇಂಗ್ಲೆಂಡ್
ಅಲಸ್ಟೇರ್ ಕುಕ್, ಹಸೀಬ್ ಹಮೀದ್, ಜೋ ರೂಟ್, ಜೋಸ್ ಬಟ್ಲರ್, ಮೊಯೀನ್ ಅಲಿ, ಜಾನಿ ಬೇರ್ಸ್ಟೋ (ವಿಕೆಟ್ಕೀಪರ್), ಬೆನ್ ಸ್ಟೋಕ್ಸ್, ಕ್ರಿಸ್ ವೋಕೆಸ್, ಆದಿಲ್ ರಶೀದ್, ಗರೇತ್ ಬ್ಯಾಟಿ ಹಾಗೂ ಜೇಮ್ಸ್ ಆ್ಯಂಡರ್ಸನ್
ಪಂದ್ಯ ಆರಂಭ: ಬೆಳಿಗ್ಗೆ 9.30
ನೇರ ಪ್ರಸಾರ: ಸ್ಟಾರ್ಸ್ಪೋರ್ಟ್ಸ್
