ಪಾಟ್ನಾ ಪರ ಪರ್'ದೀಪ್ 9 ಅಂಕ ಕಲೆಹಾಕಿದರೆ, ಯುಪಿ ಪರ ನಿತಿನ್ ತೋಮರ್ 8 ಅಂಕ ಗಳಿಸಿದರು.
ಅಹಮದಾಬಾದ್(ಆ.13): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಯುಪಿ ಯೋಧಾ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯ ರೋಚಕ ಡ್ರಾನೊಂದಿಗೆ ಅಂತ್ಯ ಕಂಡಿದೆ. ಪಂದ್ಯದ ಕೊನೆ ಕ್ಷಣದವರೆಗೂ ರೋಚಕತೆ ಹಿಡಿದಿಟ್ಟುಕೊಂಡಿದ್ದ ಪಾಟ್ನಾ ಮತ್ತು ಯುಪಿ ನಡುವಿನ ಪಂದ್ಯ 27-27 ಅಂಕಗಳಿಂದ ಡ್ರಾ ಕಂಡಿತು.
ಇಲ್ಲಿನ ಟ್ರ್ಯಾನ್ಸ್ ಸ್ಟೇಡಿಯಾ ಅರೆನಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಿ ವಲಯದಲ್ಲಿರುವ ಪಾಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾ ನಡುವಿನ ಪಂದ್ಯವು ಸ್ಟಾರ್ ರೈಡರ್'ಗಳಾದ ಪರ್'ದೀಪ್ ನರ್ವಾಲ್ ಹಾಗೂ ನಿತಿನ್ ತೋಮರ್ ನಡುವಿನ ಪೈಪೋಟಿಗೆ ಸಾಕ್ಷಿಯಾದವು.
ಮೊದಲ ರೈಡ್'ನಲ್ಲೇ ಪರ್'ದೀಪ್ ಹಾಗೂ ನಿತಿನ್ ಇಬ್ಬರೂ ಅಂಕಗಳಿಸಿದರು. ನಿತಿನ್ ಜತೆ ಕನ್ನಡಿಗ ರಿಶಾಂಕ್ ದೇವಾಡಿಗ ಸಹ ಯೋಧಾ ಅಂಕ ಗಳಿಕೆಗೆ ನೆರವಾದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಯೋಧಾ ಪಡೆ 13-10 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲೂ ಯೋಧಾ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಕೊನೆಯ 9 ನಿಮಿಷಗಳಿದ್ದಾಗ ನಿತಿನ್ ತೋಮರ್ ಪಡೆ 22-17 ಅಂಕಗಳಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು.ಆದರೆ ಪಾಟ್ನಾ ತಂಡ ಸಂಘಟಿತ ಪ್ರದರ್ಶನ ತೋರುವ ಮೂಲಕ ಕಮ್'ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು. ಪಂದ್ಯದ 36ನೇ ನಿಮಿಷದಲ್ಲಿ ಅನುಭವಿ ವಿಶಾಲ್ ಮಾನೆ ಇನ್ನಿಬ್ಬರು ಆಟಗಾರರ ಸಹಾಯದಿಂದ ರಿಶಾಂಕ್ ದೇವಾಡಿಗ ಅವರನ್ನು ಸೂಪರ್ ಟ್ಯಾಕಲ್ ಮಾಡುವ ಮೂಲಕ ಔಟ್ ಮಾಡಿದರು. ಇದರ ಪರಿಣಾಮ ಪರ್ದೀಪ್ ಅಂಕಣಕ್ಕೆ ವಾಪಸ್ಸಾದರು. ಒಂದು ಬೋನಸ್ ಹಾಗೂ ಡುಬ್ಕಿ ಮೂಲಕ 2 ಅಂಕ ಕಲೆಹಾಕಿದ ಪರ್'ದೀಪ್ ಅಂತರವನ್ನು 23-26ಕ್ಕಿಳಿಸಿದರು. ಕೊನೆ ಎರಡೂವರೆ ನಿಮಿಷದಲ್ಲಿ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಾಯಿತು. ಕೊನೆಯಲ್ಲಿ ರಾಜೇಶ್ ನರ್ವಾಲ್ ಮಾಡಿದ ಎಡವಟ್ಟಿನಿಂದಾಗಿ 2 ಅಂಕ ಗಳಿಸಿದ ಪಾಟ್ನಾ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಾಟ್ನಾ ಪರ ಪರ್'ದೀಪ್ 9 ಅಂಕ ಕಲೆಹಾಕಿದರೆ, ಯುಪಿ ಪರ ನಿತಿನ್ ತೋಮರ್ 8 ಅಂಕ ಗಳಿಸಿದರು.
