ಸ್ಪೇನ್ ಮಾಸ್ಟರ್ಸ್: ಪಿ.ವಿ ಸಿಂಧು ಫೈನಲ್‌ಗೆ ಲಗ್ಗೆ, ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ
ಈ ವರ್ಷದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಪಿ ವಿ ಸಿಂಧು
ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು ಮಿಂಚಿನ ಆಟ
ವಿಶ್ವ ರಾರಯಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು ಫೈನಲ್‌ಗೆ ಲಗ್ಗೆ
ಮ್ಯಾಡ್ರಿಡ್(ಏ.02): ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು ಸಿಂಗಾಪುರದ ಯಿಯೊ ಜಿಯಾ ಮಿನ್ ವಿರುದ್ಧ 24-22, 22-20 ನೇರ ಗೇಮ್ಗಳಲ್ಲಿ ಜಯಗಳಿಸಿ ಪ್ರಶಸ್ತಿ ಸುತ್ತಿಗೇರಿದರು. ಮೊದಲ ಗೇಮ್‌ನಲ್ಲಿ 15-20ರಿಂದ ಹಿಂದಿದ್ದ ಸಿಂಧು 20-20ರಲ್ಲಿ ಸಮಬಲ ಸಾಧಿಸಿ ಬಳಿಕ 24-22ರಲ್ಲಿ ಗೇಮ್ ಜಯಿಸಿದರು. 2ನೇ ಗೇಮ್‌ನಲ್ಲೂ ರೋಚಕ ಪೈಪೋಟಿ ನಡೆಸಿ ಮೇಲುಗೈ ಸಾಧಿಸಿದರು. ಫೈನಲ್ನಲ್ಲಿ ಅವರು ಸ್ಪೇನ್‌ನ ಕ್ಯಾರೊಲಿನಾ ಮರೀನ್ ಅಥವಾ ಇಂಡೋನೇಷ್ಯಾದ ಜಾರ್ಜಿಯಾ ಮರಿಷ್ಕಾ ತುಂಜುಂಗ್ ವಿರುದ್ಧ ಸೆಣಸಾಡಲಿದ್ದು, ಭಾರತಕ್ಕೆ ಟೂರ್ನಿಯಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.
ಐಎಸ್‌ಎಲ್: ಕೇರಳ ಬ್ಲಾಸ್ಟರ್ಗೆ ಎಐಎಫ್‌ಎಫ್ 4 ಕೋಟಿ ರುಪಾಯಿ ದಂಡ!
ನವದೆಹಲಿ: ಬೆಂಗಳೂರು ಎಫ್‌ಸಿ ವಿರುದ್ಧದ ಐಎಸ್‌ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದ ಕೇರಳ ಬ್ಲಾಸ್ಟರ್ ತಂಡಕ್ಕೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಶಿಸ್ತು ಸಮಿತಿ 4 ಕೋಟಿ ರುಪಾಯಿ ದಂಡ ವಿಧಿಸಿದೆ. ಜೊತೆಗೆ 10 ದಿನಗಳ ಒಳಗೆ ಬಹಿರಂಗ ಕ್ಷಮೆಯಾಚಿಸುವಂತೆ ತಂಡಕ್ಕೆ ಆದೇಶಿಸಿರುವ ಎಐಎಫ್‌ಎಫ್, ಆದೇಶ ಉಲ್ಲಂಘಿಸಿದರೆ 6 ಕೋಟಿ ರು. ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇನ್ನು ಇದಷ್ಟೇ ಅಲ್ಲದೇ ಕೋಚ್ ಇವಾನ್ ವುಕೊಮನೋವಿಚ್ರನ್ನು ಎಐಎಫ್‌ಎಫ್ ಆಯೋಜಿಸುವ 10 ಪಂದ್ಯಗಳಿಂದ ಅಮಾನತು ಮಾಡಿದ್ದು, 5 ಲಕ್ಷ ರು. ದಂಡ ಪಾವತಿಸಲು ಸೂಚಿಸಿ ಬಹಿರಂಗ ಕ್ಷಮೆಯಾಚನೆಗೂ ಆದೇಶಿಸಿದೆ. ಆದರೆ ಶಿಸ್ತು ಸಮಿತಿಯ ಆದೇಶದ ವಿರುದ್ಧ ಬ್ಲಾಸ್ಟರ್ಸ್ ಎಐಎಫ್ಎಫ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
Indian Super League: ಕೇರಳ ಬ್ಲಾಸ್ಟರ್ಸ್ ತಂಡಕ್ಕೆ 2 ವರ್ಷ ನಿಷೇಧ ಶಿಕ್ಷೆ?
ಏನಾಗಿತ್ತು?: ಮಾರ್ಚ್ 3ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿಯ ಸುನಿಲ್ ಚೆಟ್ರಿ ಬಾರಿಸಿದ ಫ್ರೀ ಕಿಕ್ ಗೋಲನ್ನು ವಿರೋಧಿಸಿ ಕೇರಳ ಆಟಗಾರರು ಅರ್ಧದಲ್ಲೇ ಆಟ ನಿಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಬಿಎಫ್ಸಿ ಸೆಮಿಫೈನಲ್‌ಗೇರಿತ್ತು.
ಮೈಸೂರು ಓಪನ್ ಟೆನಿಸ್: ಸೆಮೀಸಲ್ಲಿ ಪ್ರಜ್ವಲ್‌ಗೆ ಸೋಲು
ಮೈಸೂರು: ಇಲ್ಲಿ ನಡೆಯುತ್ತಿರುವ ಮೈಸೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಶನಿವಾರ ನಡೆದ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ವಿಶ್ವ ರಾರಯಂಕಿಂಗ್‌ನಲ್ಲಿ 1027ನೇ ಸ್ಥಾನದಲ್ಲಿರುವ ಮೈಸೂರಿನ ಪ್ರಜ್ವಲ್ ಬ್ರಿಟನ್‌ನ ಜಾಜ್‌ರ್ ಲೋಫಾಜೆನ್ ವಿರುದ್ಧ 5-7, 4-6 ನೇರ ಸೆಟ್ಗಳಲ್ಲಿ ಪರಾಭಭವಗೊಂಡರು. ಭಾನುವಾರ ಫೈನಲ್ನಲ್ಲಿ ಲೋಫಾಜೆನ್ ಆಸ್ಪ್ರೇಲಿಯಾದ ಬ್ಲೇಕ್ ಎಲ್ಲಿಸ್ ವಿರುದ್ಧ ಸೆಣಸಾಡಲಿದ್ದಾರೆ. ಸೆಮೀಸ್ನಲ್ಲಿ ಎಲ್ಲಿಸ್ ಅಮೆರಿಕದ ಓಲಿವರ್ ಕ್ರಾಫರ್ಡ್ ವಿರುದ್ಧ 7-5, 6-3 ಅಂತರದಲ್ಲಿ ಜಯಗಳಿಸಿದರು.
ಇದೇ ವೇಳೆ ಭಾರತದ ಶಶಿಕುಮಾರ್ ಮುಕುಂದ್-ವಿಷ್ಣುವರ್ಧನ್ ಜೋಡಿ ಡಬಲ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಜೋಡಿ ಶನಿವಾರ ಫೈನಲ್ನಲ್ಲಿ ಭಾರತದವರೇ ಆದ ನಿಕ್ಕಿ ಪೂನಚ್ಚ-ರಿತ್ವಿಕ್ ಚೌಧರಿ ವಿರುದ್ಧ 6-3, 6-4 ನೇರ ಸೆಟ್ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.