ಭುವನೇಶ್ವರ[ಮೇ.27]: ಸಹೋದರಿಯ ಮೇಲೆ ಬ್ಲ್ಯಾಕ್‌ಮೇಲ್ ಆರೋಪ ಮಾಡಿ ತನ್ನ ಸಲಿಂಗ ಪ್ರೇಮದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡು ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸಿದ್ದ ಭುವನೇಶ್ವರದ ಖ್ಯಾತ ಅಥ್ಲೀಟ್ ದ್ಯುತಿ ಚಂದ್, ಈಗ ಪ್ರೇಮಿಗಳ ದಿನ ತಮ್ಮ ಮೊಬೈಲ್’ಗೆ ಬಂದ ಮೆಸೇಜ್ ಒಂದರ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಸಲಿಂಗಿ ಸಂಗಾತಿ ರಹಸ್ಯ ಬಹಿರಂಗ ಪಡಿಸಿದ ದ್ಯುತಿ ಚಾಂದ್!

ಸಂದರ್ಶನವೊಂದರಲ್ಲಿ ತಮ್ಮ ಸಲಿಂಗಕಾಮದ ಹಿಂದಿನ ವಿಚಾರಗಳನ್ನೆಲ್ಲಾ ಹೇಳಿಕೊಂಡಿದ್ದ ದ್ಯುತಿ, ತಾನೀಗ ಯಾವ ಸಲಿಂಗಿಯೊಂದಿಗೆ ಸಂಪರ್ಕದಲ್ಲಿದ್ದೇನೋ ಆಕೆ ಪ್ರೇಮಿಗಳ ದಿನದಂದು ಕಳುಹಿಸಿದ ಸಂದೇಶದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ಹೈದರಾಬಾದ್’ನಲ್ಲಿರುವಾಗ ಆಕೆ ವಾಟ್ಸ್ಅಪ್’ನ ಸಂದೇಶದ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದನ್ನು ದ್ಯುತಿ ಬಹಿರಂಗ ಪಡಿಸಿದ್ದಾರೆ.

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಭಾರತದಲ್ಲಿ ಒಂದೇ ಲಿಂಗದ ಇಬ್ಬರು ಮದುವೆಯಾಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ತಾವು ಬಹಿರಂಗವಾಗಿ ಸಲಿಂಗ ಕಾಮ ಒಪ್ಪಿಕೊಳ್ಳಲು ಧೈರ್ಯ ನೀಡಿತು ಎಂದು ದ್ಯುತಿ ಹೇಳಿಕೊಂಡಿದ್ದಾರೆ. 

ಈ ಮೊದಲು ‘ನಾನು ಸಲಿಂಗಕಾಮಿ’ ಎಂದು ಬಹಿರಂಗವಾಗಿ ಹೇಳುವ ಮೂಲಕ ಸಂಚಲನ ಸೃಷ್ಟಿಸಿರುವ ಭಾರತದ ಅಗ್ರ ಅಥ್ಲೀಟ್‌ ದ್ಯುತಿ ಚಂದ್‌ಗೆ ಕುಟುಂಬದಿಂದಲೇ ವಿರೋಧ ವ್ಯಕ್ತವಾಗಿದ್ದು, ತಾವು ತಮ್ಮ ಸಂಬಂಧದ ಬಗ್ಗೆ ಬಹಿರಂಗಪಡಿಸಲು ಸಹೋದರಿಯ ಕಿರುಕುಳವೇ ಕಾರಣ ಎಂದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದ್ಯುತಿ, ‘ನನ್ನ ಸ್ವಂತ ಅಕ್ಕ ನನಗೆ ಬೆದರಿಕೆ ಹಾಕುತ್ತಿದ್ದಾಳೆ. 25 ಲಕ್ಷ ರುಪಾಯಿ ನೀಡುವಂತೆ ಒತ್ತಾಯಿಸುತ್ತಿದ್ದಾಳೆ. ಒಮ್ಮೆ ನನ್ನ ಮೇಲೆ ಹಲ್ಲೆ ಸಹ ನಡೆಸಿದ್ದಾಳೆ. ಪೊಲೀಸರಿಗೆ ನಾನು ದೂರು ಸಹ ನೀಡಿದ್ದೇನೆ. ಕಿರುಕುಳ ತಡೆಯಲಾಗದೆ ನಾನು ನನ್ನ ಸಂಬಂಧದ ಬಗ್ಗೆ ಬಹಿರಂಗಪಡಿಸಬೇಕಾಯಿತು’ ಎಂದು ಹೇಳಿದ್ದರು.