Asianet Suvarna News Asianet Suvarna News

ಭಾರತ ಕಬಡ್ಡಿಯ ಗರ್ಭಗುಡಿ ಸೋನೆಪತ್‌!

ಪ್ರೋ ಕಬಡ್ಡಿ ಲೀಗ್ ಟೂರ್ನಿ ಪಂದ್ಯಗಳು ಚೆನ್ನೈ ಬಳಿಕ ಇದೀಗ ಸೋನೆಪತ್‌ನಲ್ಲಿ ನಡೆಯುತ್ತಿದೆ.  ಹರ್ಯಾಣದ ಸೋನೆಪತ್‌ ದೇಶದ ಕಬಡ್ಡಿ ರಾಜಧಾನಿ. 600ಕ್ಕೂ ಹೆಚ್ಚು ಕಬಡ್ಡಿ ಪಟುಗಳನ್ನು ಕೊಡುಗೆ ನೀಡಿರುವ ಜಿಲ್ಲೆಯಿಂದ, ಪ್ರೊ ಕಬಡ್ಡಿಯಲ್ಲಿ 40ಕ್ಕೂ ಹೆಚ್ಚು ಆಟಗಾರರು ಕಣದಲ್ಲಿದ್ದಾರೆ. 

Sonepat the kabaddi capital of India
Author
Bengaluru, First Published Oct 18, 2018, 11:08 AM IST

ಸೋನೆಪತ್(ಅ.18):  ಕೊಲೆ, ಸುಲಿಗೆ, ಮೋಸ, ಅತ್ಯಾಚಾರಗಳಿಂದ ಕುಖ್ಯಾತಿ ಪಡೆದಿದ್ದ ಸೋನೆಪತ್‌, ಇದೀಗ ದೇಶದ ಕಬಡ್ಡಿ ರಾಜಧಾನಿಯಾಗಿ ಬದಲಾಗಿದೆ. ಪ್ರೊ ಕಬಡ್ಡಿ ಆರಂಭವಾದ ನಂತರವಂತೂ ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬೊಬ್ಬ ಕಬಡ್ಡಿ ಪಟು ಹುಟ್ಟಿಕೊಂಡಿದ್ದಾನೆ.

‘ಸೋನೆಪತ್‌ ಮಣ್ಣಿನಲ್ಲಿಯೇ ಕಬಡ್ಡಿಯಿದೆ. ಇಲ್ಲಿನ ಪ್ರತಿಯೊಬ್ಬರೂ ಕೂಡ ಕಬಡ್ಡಿಯನ್ನು ಉಸಿರಾಡುತ್ತಾರೆ. ಸೋನೆಪತ್‌ ದೇಶದ ಕಬಡ್ಡಿ ತವರೂರಾಗಿ ಮಾರ್ಪಟ್ಟಿದೆ. ರವೀಂದರ್‌ ಪಹಲ್‌, ಡುಬ್ಕಿ ಕಿಂಗ್‌ ಪ್ರದೀಪ್‌ ನರ್ವಾಲ್‌, ಜೋಗಿಂದರ್‌ ನರ್ವಾಲ್‌, ಕುಲ್ದೀಪ್‌ ಸಿಂಗ್‌ರಂತ ಶ್ರೇಷ್ಠ ಕಬಡ್ಡಿ ಪಟುಗಳನ್ನು ಸೋನೆಪತ್‌ ನೀಡಿದೆ ಎನ್ನುತ್ತಾರೆ ಇಲ್ಲಿನ ಸುಭಾಷ್‌ ಚಂದ್ರ ಬೋಸ್‌ ಕಬಡ್ಡಿ ಕೋಚಿಂಗ್‌ ಕೇಂದ್ರದ ಕೋಚ್‌ ಶ್ರೀಪಾಲ್‌.

ಅಂದಾಜು 15 ಲಕ್ಷ ಜನಸಂಖ್ಯೆ ಹೊಂದಿರುವ ಸೋನೆಪತ್‌, ಹರ್ಯಾಣ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆ ಈವರೆಗೂ 600ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಟುಗಳನ್ನು ನೀಡಿದೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಇಲ್ಲಿನ 40ಕ್ಕೂ ಹೆಚ್ಚು ಕಬಡ್ಡಿ ಆಟಗಾರರು ಕಾಣಿಸಿಕೊಂಡಿದ್ದಾರೆ.

ಮ್ಯಾಟ್‌ ಕಬಡ್ಡಿ ಆರಂಭಗೊಂಡಿದ್ದೇಗೆ?
ಪಂಜಾಬ್‌ ಮತ್ತು ಹರ್ಯಾಣ ರಾಜ್ಯಗಳಲ್ಲಿ ಸರ್ಕಲ್‌ ಕಬಡ್ಡಿ ಹೆಚ್ಚು ಪ್ರಸಿದ್ಧಿ. ಆದರೆ ಟೆಕ್ನಿಕಲ್‌ ಕಬಡ್ಡಿ ಆರಂಭವಾಗಿದ್ದು 1978-79ರಲ್ಲಿ. ಜಗದೇವ್‌ ಸಿಂಗ್‌ ಎಂಬ ದೈಹಿಕ ಶಿಕ್ಷಕರೊಬ್ಬರು ಅಗವಾನ್‌ಪುರದಲ್ಲಿ ಟೆಕ್ನಿಕಲ್‌ ಕಬಡ್ಡಿ ಆರಂಭಿಸಿದರು. ಜತೆಗೆ ತಮ್ಮ ಸ್ನೇಹಿತರಾದ ಶ್ರೀಪಾಲ್‌ರೊಂದಿಗೆ ಸೇರಿ ಸಮೀಪದ ರಿಂಧಾನಾ, ಖತುರಾ, ಬುಡಶ್ಯಾಮ್‌, ಫೋರ್ಖಾಸ್‌, ರಾಜ್‌ಪೂರ್‌, ರಿಂಧಾನಾ ಗಿರಿಜ್‌ ಗ್ರಾಮಗಳಲ್ಲಿ ಕಬಡ್ಡಿ ತರಬೇತಿ ನೀಡಲು ಶುರು ಮಾಡಿದರು. ಸುಮಾರು 2 ವರ್ಷಗಳವರೆಗೆ ತರಬೇತಿ ನೀಡಲಾಯಿತು. 1983-84ರಲ್ಲಿ ಕಟಕ್‌ನಲ್ಲಿ ನಡೆದ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಸೋನೆಪತ್‌ ತಂಡ ಚಾಂಪಿಯನ್‌ ಆಯಿತು. ಆರಂಭದಲ್ಲಿ ಪ್ರೋತ್ಸಾಹ ಕೊರತೆ ಎದುರಿಸಿದರೂ ನಿಧಾನವಾಗಿ ಕಬಡ್ಡಿಯತ್ತ ಇಲ್ಲಿನ ಯುವಕರು ಆಕರ್ಷಿತರಾದರು ಎನ್ನುತ್ತಾರೆ ಶ್ರೀಪಾಲ್‌.

1994ರ ಏಷ್ಯನ್‌ ಗೇಮ್ಸ್‌ನಲ್ಲಿ ಸುರೇಂದರ್‌ ನರ್ವಾಲ್‌, ಅನಿಲ್‌ ನರ್ವಾಲ್‌ರಂತಹ ಶ್ರೇಷ್ಠ ಆಟಗಾರರು ಕಾಣಿಸಿಕೊಂಡಿದ್ದು ಸೋನೆಪತ್‌ನಲ್ಲಿ ಕಬಡ್ಡಿ ದಿಕ್ಕನ್ನು ಬದಲಿಸಿತು. 1998 ಮತ್ತು 2002ರ ಏಷ್ಯನ್‌ ಗೇಮ್ಸ್‌ನಲ್ಲಿ ಶಂಶೇರಾ ನರ್ವಾಲ್‌, ಜಗದೀಶ್‌ ನರ್ವಾಲ್‌ ಆಡಿದ್ದು, ಇಲ್ಲಿ ಕಬಡ್ಡಿ ಜನಪ್ರಿಯತೆ ಹೆಚ್ಚಿಸಿತು.

ಬಳಿಕ ನೀರ್‌ಗುಡಿಯಾ, ಸುರ್ಜೀತ್‌ ನರ್ವಾಲ್‌, ಪ್ರದೀಪ್‌ ನರ್ವಾಲ್‌, ಜೋಗಿಂದರ್‌ ನರ್ವಾಲ್‌, ಮಹಿಪಾಲ್‌, ಅನಿಲ್‌ ಕುಮಾರ್‌, ಸುರ್ಜೀತ್‌ ಸಿಂಗ್‌ರಂತಹ ಶ್ರೇಷ್ಠ ಕಬಡ್ಡಿ ಪಟುಗಳನ್ನು ಸೋನೆಪತ್‌ ಕೊಡುಗೆ ನೀಡಿದೆ.

ಸರ್ಕಾರಿ ಕೆಲಸಕ್ಕಾಗಿ ಕಬಡ್ಡಿ ಆಟ:
ಗ್ರಾಮೀಣ ಪ್ರದೇಶ ಹಾಗೂ ಬಡವರ ಕ್ರೀಡೆಯಾಗಿರುವ ಕಬಡ್ಡಿಯನ್ನು ಇಲ್ಲಿನ ಬಹುತೇಕರು ಸರ್ಕಾರಿ ಕೆಲಸ ಗಿಟ್ಟಿಸುವುದಕ್ಕಾಗಿಯೇ ಆಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಪ್ರತಿಯೊಬ್ಬರೂ ಕಬಡ್ಡಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಮನೋಭಾವದೊಂದಿಗೆ ಕ್ರೀಡೆಗೆ ಕಾಲಿಡುತ್ತಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ಪ್ರದೀಪ್‌ ನರ್ವಾಲ್‌ ಜನಪ್ರಿಯತೆ ಮತ್ತು ಪ್ರೊ ಕಬಡ್ಡಿ ಲೀಗ್‌ ಬೆಳೆಯುತ್ತಿರುವ ವೇಗ ಇಲ್ಲಿ ಕಬಡ್ಡಿಗೆ ಹೆಚ್ಚು ಮಹತ್ವ ಸಿಗುವಂತೆ ಮಾಡಿದೆ.

ಕಬಡ್ಡಿ ಅಕಾಡೆಮಿಗಳ ಅಬ್ಬರ:
ಹರ್ಯಾಣದಲ್ಲಿ ಕಬಡ್ಡಿ ಬೆಳವಣಿಗೆ ಜೋರಾಗಿಯೇ ಇದೆ. ಶಾಲಾ ಮಕ್ಕಳಿಗಾಗಿ ನರ್ಸರಿ ಆರಂಭವಾಗಿದ್ದರೆ, ಯುವ ಕಬಡ್ಡಿ ಪಟುಗಳಿಗಾಗಿ ಅನೇಕ ಅಕಾಡೆಮಿಗಳು ಆರಂಭವಾಗಿವೆ. ಪ್ರದೀಪ್‌ ನರ್ವಾಲ್‌, ಸ್ವತಃ ಒಂದು ಅಕಾಡೆಮಿ ಆರಂಭಿಸಿದ್ದಾರೆ. ಪ್ರತಿ ವರ್ಷ ಸರ್ಕಾರ, ದೀನ್‌ ದಯಾಳ್‌ ಉಪಾಧ್ಯಾಯ ಓಪನ್‌ ಕಬಡ್ಡಿ ಚಾಂಪಿಯನ್‌ಶಿಪ್‌ ನಡೆಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡತ್ತಿದೆ. ಪ್ರತಿ ಜಿಲ್ಲೆಯಲ್ಲೂ ಸರ್ಕಾರವೇ 2 ಕಬಡ್ಡಿ ನರ್ಸರಿ ಶಾಲೆಗಳನ್ನು ತರೆದಿದ್ದು, 25 ಬಾಲಕರು ಮತ್ತು 25 ಬಾಲಕಿರಿಯರಿಗೆ ತರಬೇತಿ ನೀಡಲಾಗುತ್ತಿದೆ.

ಇನ್ನೂ ಸರ್ಕಲ್‌ ಕಬಡ್ಡಿ ಕ್ರೇಜ್‌!
ಪಂಜಾಬ್‌ ಮತ್ತು ಹರ್ಯಾಣದಲ್ಲಿ ಸರ್ಕಲ್‌ ಕಬಡ್ಡಿ ಭಾರೀ ಜನಪ್ರಿಯತೆ ಹೊಂದಿದೆ. ಈ ಎರಡೂ ರಾಜ್ಯಗಳಲ್ಲಿ ಮ್ಯಾಟ್‌ ಕಬಡ್ಡಿಗಿಂತ ಮಣ್ಣಿನ ಅಂಕಣದಲ್ಲಿ ಆಡುವ ಸರ್ಕಲ್‌ ಕಬಡ್ಡಿಗೇ ಹೆಚ್ಚು ಪ್ರಾಮುಖ್ಯತೆ. ಈ ಮಾದರಿಯಲ್ಲಿ ವಿಶ್ವಕಪ್‌ ಟೂರ್ನಿ ಕೂಡ ನಡೆಯುತ್ತದೆ. ಈಗಲೂ ಸಹ ಕೆಲ ಕಬಡ್ಡಿ ಆಟಗಾರರು ಸರ್ಕಲ್‌ ಕಬಡ್ಡಿ ಆಡಿಯೇ ಮ್ಯಾಟ್‌ ಕಬಡ್ಡಿಗೆ ಪ್ರವೇಶ ಪಡೆಯುತ್ತಾರೆ. ಪ್ರೊ ಕಬಡ್ಡಿ ಬಳಿಕ ಸರ್ಕಲ್‌ ಕಬಡ್ಡಿ ಪ್ರಾಮುಖ್ಯತೆ ಏನೂ ಕಡಿಮೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯ ಕೋಚ್‌ ಸುಶೀಲ್‌ ಶಾಸ್ತ್ರಿ.

ಸರ್ಕಲ್‌ ಕಬಡ್ಡಿ, ಏನಿದು?
ಸರ್ಕಲ್‌ ಕಬಡ್ಡಿ ದೊಡ್ಡ ಅಂಕಣದಲ್ಲಿ ಆಡಲಾಗುತ್ತದೆ. ವೃತ್ತಾಕಾರದಲ್ಲಿ ಅಂಕಣವಿರುತ್ತದೆ. 2 ತಂಡಗಳಲ್ಲಿ ತಲಾ 8 ಆಟಗಾರರು ಇರುತ್ತಾರೆ. ಇಲ್ಲಿ ರೈಡರ್‌ ಅನ್ನು ಒಬ್ಬ ಡಿಫೆಂಡರ್‌ ಮಾತ್ರ ಹಿಡಿಯಲು ಪ್ರಯತ್ನಿಸುತ್ತಾನೆ. ಹಾಗೇ ಡಿಫೆಂಡರ್‌ ಔಟಾದರೆ, ಅಂಕಣದಿಂದ ಹೊರಹೋಗುವುದಿಲ್ಲ. ಬದಲಿಗೆ ರೈಡಿಂಗ್‌ ತಂಡಕ್ಕೆ ಒಂದು ಅಂಕ ಸಿಗುತ್ತದೆ ಅಷ್ಟೇ. ಮ್ಯಾಟ್‌ ಕಬಡ್ಡಿಯಂತೆ ಸರ್ಕಲ್‌ ಕಬಡ್ಡಿ ಸಹ 40 ನಿಮಿಷಗಳ ಕಾಲ ನಡೆಯುತ್ತದೆ.

ಮಲ್ಲಪ್ಪ ಸಿ.ಪಾರೇಗಾಂವ

Follow Us:
Download App:
  • android
  • ios