ದೊಡ್ಡ ಗಣೇಶ್, ಲ್ಯಾನ್ಸ್ ಕ್ಲೂಸ್ನೆರ್, ರಾಕೇಶ್ ಶರ್ಮಾ ಮತ್ತು ಉಪೇಂದ್ರನಾಥ್ ಬ್ರಹ್ಮಚಾರಿ ಅವರಿಗೆ ಇಂಟರ್ವ್ಯೂಗೆ ಆಹ್ವಾನಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸಂದರ್ಶನದಲ್ಲಿ ಆರು ಅಭ್ಯರ್ಥಿಗಳ ಬಗ್ಗೆ ಬಿಸಿಸಿಐ ಸಮಾಧಾನವಾಗದಿದ್ದಲ್ಲಿ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಅವರನ್ನು ಇಂಟರ್ವ್ಯೂ'ಗೆ ಕರೆಯುವ ಚಿಂತನೆ ಇದೆ ಎನ್ನಲಾಗಿದೆ.

ಮುಂಬೈ(ಜುಲೈ 09): ಅನಿಲ್ ಕುಂಬ್ಳೆ ರಾಜೀನಾಮೆ ವಿವಾದದ ಬಳಿಕ ಟೀಮ್ ಇಂಡಿಯಾದ ಕೋಚ್ ಹುದ್ದೆಯ ನೇಮಕಾತಿಯು ಬಿಸಿಸಿಐಗೆ ಪ್ರತಿಷ್ಠೆಯ ವಿಷಯವಾಗಿದೆ. ಮುಖ್ಯಕೋಚ್ ಸ್ಥಾನಕ್ಕೆ ಬಹಿರಂಗವಾಗಿಯೇ ಅರ್ಜಿಗೆ ಆಹ್ವಾನಿಸಿದರೂ ಕೇವಲ 10 ಅಪ್ಲಿಕೇಶನ್ಸ್ ಮಾತ್ರ ಬಂದಿವೆ. ಇವರ ಪೈಕಿ 6 ಮಂದಿಯನ್ನು ಸಂದರ್ಶನಕ್ಕೆ ಕರೆಯಲು ಬಿಸಿಸಿಐ ನಿರ್ಧರಿಸಿರುವುದು ತಿಳಿದುಬಂದಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಫಿಲ್ ಸಿಮೋನ್ಸ್, ರಿಚರ್ಡ್ ಪೈಬಸ್ ಮತ್ತು ಲಾಲ್'ಚಾಂದ್ ರಜಪೂತ್ ಅವರನ್ನು ಸಂದರ್ಶನಕ್ಕೆಂದು ಬಿಸಿಸಿಐ ಶಾರ್ಟ್'ಲಿಸ್ಟ್ ಮಾಡಿದೆ.

ದೊಡ್ಡ ಗಣೇಶ್, ಲ್ಯಾನ್ಸ್ ಕ್ಲೂಸ್ನೆರ್, ರಾಕೇಶ್ ಶರ್ಮಾ ಮತ್ತು ಉಪೇಂದ್ರನಾಥ್ ಬ್ರಹ್ಮಚಾರಿ ಅವರಿಗೆ ಇಂಟರ್ವ್ಯೂಗೆ ಆಹ್ವಾನಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸಂದರ್ಶನದಲ್ಲಿ ಆರು ಅಭ್ಯರ್ಥಿಗಳ ಬಗ್ಗೆ ಬಿಸಿಸಿಐ ಸಮಾಧಾನವಾಗದಿದ್ದಲ್ಲಿ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಅವರನ್ನು ಇಂಟರ್ವ್ಯೂ'ಗೆ ಕರೆಯುವ ಚಿಂತನೆ ಇದೆ ಎನ್ನಲಾಗಿದೆ.

ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರು:
1) ರವಿ ಶಾಸ್ತ್ರಿ, ಭಾರತ
2) ವೀರೇಂದ್ರ ಸೆಹ್ವಾಗ್, ಭಾರತ
3) ಟಾಮ್ ಮೂಡಿ, ಆಸ್ಟ್ರೇಲಿಯಾ
4) ರಿಚರ್ಡ್ ಪೈಬಸ್, ಇಂಗ್ಲೆಂಡ್
5) ದೊಡ್ಡ ಗಣೇಶ್, ಭಾರತ
6) ಲಾಲ್'ಚಂದ್ ರಜಪೂತ್, ಭಾರತ
7) ಲ್ಯಾನ್ಸ್ ಕ್ಲೂಸ್ನರ್, ದಕ್ಷಿಣ ಆಫ್ರಿಕಾ
8) ರಾಕೇಶ್ ಶರ್ಮಾ, ಭಾರತ
9) ಫಿಲ್ ಸಿಮೋನ್ಸ್, ವೆಸ್ಟ್ ಇಂಡೀಸ್
10) ಉಪೇಂದ್ರನಾಥ್ ಬ್ರಹ್ಮಚಾರಿ, ಭಾರತ

ಇವರ ಪೈಕಿ ಉಪೇಂದ್ರನಾಥ್ ಬ್ರಹ್ಮಚಾರಿಯೊಬ್ಬರೇ ಕ್ರಿಕೆಟ್ ಹಿನ್ನೆಲೆ ಇಲ್ಲದ ಅಭ್ಯರ್ಥಿ ಎನಿಸಿದ್ದಾರೆ. ಭಾರತೀಯರಿಗೆ ಹೆಚ್ಚೂಕಡಿಮೆ ಅಪರಿಚಿತರಾಗಿರುವ ರಿಚರ್ಡ್ ಪೈಬಸ್ ಸಾಕಷ್ಟು ಕೋಚಿಂಗ್ ಅನುಭವ ಹೊಂದಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ರಾಷ್ಟ್ರೀಯ ತಂಡಗಳ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಆಂಗ್ಲ ಸಂಜಾತ ಪೈಬಸ್ ಅವರು ಸದ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ರಾಕೇಶ್ ಶರ್ಮಾ ಅವರು ಒಮಾನ್ ರಾಷ್ಟ್ರೀಯ ತಂಡದ ಕೋಚ್ ಆಗಿದ್ದಾರೆ. ಕರ್ನಾಟಕದ ಮಾಜಿ ವೇಗಿ ದೊಡ್ಡ ಗಣೇಶ್ ಅವರು ಪ್ರಮುಖ ತಂಡಗಳ ಕೋಚಿಂಗ್ ಅನುಭವವಿಲ್ಲದಿದ್ದರೂ ರಾಷ್ಟ್ರೀಯ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವುದು ಹಲವರ ಹುಬ್ಬೇರಿಸಿದೆ. ಇವರೆಲ್ಲರ ಪೈಕಿ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೆಲವಾರು ದಿನಗಳಿಂದ ಕೇಳಿಬರುತ್ತಿದೆ. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರಿರುವ ಕ್ರಿಕೆಟ್ ಅಡ್ವೈಸರಿ ಕಮಿಟಿ(ಸಿಎಸಿ) ಎಲ್ಲಾ ಅಭ್ಯರ್ಥಿಗಳ ಅರ್ಜಿ ಪರಿಶೀಲಿಸಿ ಸಂದರ್ಶನಕ್ಕೆ ಅಂತಿಮ ಪಟ್ಟಿ ತಯಾರಿಸಲಿದ್ದಾರೆ. ಈ ಕ್ರಿಕೆಟ್ ತ್ರಿಮೂರ್ತಿಗಳೇ ಸಂದರ್ಶನ ನಡೆಸಿ ಕೋಚ್ ಆಯ್ಕೆ ಮಾಡಲಿದ್ದಾರೆ.