ಸಿಂಗಾಪುರ[ಏ.11] ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಇಂಡೋನೇಷ್ಯಾದ ಯಾನಿ ಅಲೆಸ್ಸಾಂದ್ರಾ ವಿರುದ್ಧ 21-9, 21-7 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ರನ್ನು ಎದುರಿಸಲಿದ್ದಾರೆ. ಮತ್ತೊಂದು ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಇಂಡೋನೇಷ್ಯಾದ ಯುಲಿಯಾ ಯೊಸೆಫಿನ್ ಎದುರು 21-16, 21-11 ಗೇಮ್ ಗಳಲ್ಲಿ ಜಯ ಪಡೆದರು. 2ನೇ ಸುತ್ತಿನಲ್ಲಿ ಸೈನಾ, ಥಾಯ್ಲೆಂಡ್ ನ ಚೊಚುವಾಂಗ್ ಎದುರು ಸೆಣಸಲಿದ್ದಾರೆ. 

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಕಿದಂಬಿ ಶ್ರೀಕಾಂತ್, ಥಾಯ್ಲೆಂಡ್‌ನ ಸಿತ್ತಿಕೋಮ್ ತಮ್ಮಾಸಿನ್ ವಿರುದ್ಧ 21-17, 21-18 ಗೇಮ್ ಗಳಲ್ಲಿ ಗೆಲುವು ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಶ್ರೀಕಾಂತ್, ಡೆನ್ಮಾರ್ಕ್‌ನ ಹನ್ಸ್ ಕ್ರಿಸ್ಟಿನ್ ರನ್ನು ಎದುರಿಸಲಿದ್ದಾರೆ. ಇನ್ನೊಂದು ಸಿಂಗಲ್ಸ್‌ನಲ್ಲಿ ಪಿ. ಕಶ್ಯಪ್, ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ಧ 21-19, 21-14 ಗೇಮ್ ಗಳಲ್ಲಿ ಜಯಿಸಿದರು. ಮುಂದಿನ ಸುತ್ತಿನಲ್ಲಿ ಕಶ್ಯಪ್, ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ರನ್ನು ಎದುರಿಸಲಿದ್ದಾರೆ. ಉಳಿದಂತೆ ಸಮೀರ್ ವರ್ಮಾ, ಎಚ್.ಎಸ್. ಪ್ರಣಯ್ ಗೆದ್ದು 2ನೇ ಸುತ್ತಿಗೇರಿದರು. ಬಿ. ಸಾಯಿ ಪ್ರಣೀತ್ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲಿ ಗೆದ್ದಿದ್ದು 2ನೇ ಸುತ್ತಿಗೇರಿದ್ದಾರೆ.