ರಾಜಸ್ಥಾನದ 17 ವರ್ಷದ ದಿವ್ಯಾನ್ಶ್ ಸಿಂಗ್ ಪನ್ವಾರ್ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಬೀಜಿಂಗ್[ಏ.27]: ಭಾರತದಲ್ಲಿ ಮತ್ತೊಂದು ಶೂಟಿಂಗ್ ತಾರೆಯ ಉದಯವಾಗಿದೆ. ರಾಜಸ್ಥಾನದ 17 ವರ್ಷದ ದಿವ್ಯಾನ್ಶ್ ಸಿಂಗ್ ಪನ್ವಾರ್ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಈ ವರೆಗೂ ಭಾರತದ ನಾಲ್ವರು ಶೂಟರ್‌ಗಳು ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲಾ (ಮಹಿಳೆಯರ 10 ಮೀ. ಏರ್ ರೈಫಲ್) ಹಾಗೂ ಸೌರಭ್ ಚೌಧರಿ (ಪುರುಷರ 10 ಮೀ. ಏರ್ ಪಿಸ್ತೂಲ್) ಒಲಿಂಪಿಕ್ಸ್‌ಗೆ ಈ ಮೊದಲೇ ಅರ್ಹತೆ ಗಿಟ್ಟಿಸಿದ್ದರು.
ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ ದಿವ್ಯಾನ್ಶ್, 8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದರು. 24 ಶಾಟ್‌ಗಳ ಸ್ಪರ್ಧೆಯಲ್ಲಿ ಅವರ ಯಾವುದೇ ಯತ್ನದಲ್ಲಿ 10.1 ಅಂಕಕ್ಕಿಂತ ಕಡಿಮೆ ಗಳಿಸಲಿಲ್ಲ. ಒಟ್ಟು 249.0 ಅಂಕ ಗಳಿಸಿದ ದಿವ್ಯಾನ್ಶ್, ಕೇವಲ 0.4 ಅಂಕಗಳ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು. 249.4 ಅಂಕ ಗಳಿಸಿದ ಚೀನಾದ ಝಿಚೆಂಗ್ ಹುಯಿ ಚಿನ್ನ ಗೆದ್ದರೆ, 227.5 ಅಂಕ ಗಳಿಸಿದ ರಷ್ಯಾದ ಶಮಕೊವ್ ಕಂಚು ಗೆದ್ದರು. ಈ ವಿಶ್ವಕಪ್‌ನಲ್ಲಿ ಭಾರತಕ್ಕಿದು 3ನೇ ಪದಕವಾಗಿದ್ದು, 2 ಚಿನ್ನ, 1 ಬೆಳ್ಳಿಯೊಂದಿಗೆ ಪದಕ ಪಟ್ಟಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
