Khel Ratna ಪ್ರಶಸ್ತಿಗೆ ಶರತ್ ಕಮಲ್ ಹೆಸರು ಶಿಫಾರಸು, ಲಕ್ಷ್ಯ ಸೆನ್‌ಗೆ ಒಲಿಯಲಿದೆ ಅರ್ಜುನ ಪ್ರಶಸ್ತಿ
ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಶರತ್ ಕಮಲ್ ಹೆಸರು ಶಿಫಾರಸು
ಅರ್ಜುನ ಪ್ರಶಸ್ತಿಗೆ ಲಕ್ಷ್ಯ ಸೆನ್ ಸೇರಿ 25 ಆಟಗಾರರ ಹೆಸರು ಶಿಫಾರಸು
ಯಾವುದೇ ಕ್ರಿಕೆಟಿಗರ ಹೆಸರು ಅರ್ಜನ ಪ್ರಶಸ್ತಿಗಿಲ್ಲ
ನವದೆಹಲಿ(ನ.05): ಭಾರತದ ತಾರಾ ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಅವರನ್ನು ಆಯ್ಕೆ ಸಮಿತಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇನ್ನು ಯುವ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೆನ್, ಕುಸ್ತಿಪಟು ಅನ್ಷ್ಯು ಮಲಿಕ್ ಸೇರಿದಂತೆ 25 ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 40 ವರ್ಷದ ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್, 2022ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಕೆಲ ತಿಂಗಳ ಹಿಂದಷ್ಟೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ಚಿನ್ನ ಹಾಗೂ ಒಂದು ಬೆಳ್ಳಿ ಸಹಿತ 4 ಪದಕ ಜಯಿಸಿ ಮಿಂಚಿದ್ದರು. ಇನ್ನು ಶರತ್ ಕಮಲ್ ಎರಡು ಬಾರಿ ಏಷ್ಯನ್ ಗೇಮ್ಸ್‌ನಲ್ಲೂ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.
ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಕೇವಲ ಶರತ್ ಕಮಲ್ ಅವರ ಹೆಸರನ್ನಷ್ಟೇ ಶಿಫಾರಸು ಮಾಡಲಾಗಿದೆ. ಶರತ್ ಕಮಲ್ ಇದೀಗ ಖೇಲ್ ರತ್ನ ಪ್ರಶಸ್ತಿ ಪಡೆದ ಎರಡನೇ ಟೇಬಲ್ ಟೆನಿಸ್ ಪಟು ಎನಿಸಿಕೊಳ್ಳಲಿದ್ದಾರೆ. ಈ ಮೊದಲು ತಾರಾ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ, ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಅರ್ಜುನ ಪ್ರಶಸ್ತಿಗೆ ಒಟ್ಟು 25 ಆಟಗಾರರ ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ಇದರಲ್ಲಿ ಲಕ್ಷ್ಯ ಸೆನ್, ಬಾಕ್ಸಿಂಗ್ ಪಟು ನಿಖಾನ್ ಜರೀನ್, ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ಯಾನಂದ, ಕುಸ್ತಿಪಟು ಅನ್ಷ್ಯು ಮಲಿಕ್ ಹಾಗೂ ಸರಿತ ಮೋರ್ ಪ್ರಮುಖರೆನಿಸಿಕೊಂಡಿದ್ದಾರೆ. ಆದರೆ ಅಚ್ಚರಿಯನ್ನುವಂತೆ ಈ ಬಾರಿ ಯಾವುದೇ ಕ್ರಿಕೆಟಿಗರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ.
Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ..!
ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೆನ್ ಕಳೆದ ವರ್ಷ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚನ ಪದಕ ಜಯಿಸಿದ್ದರು. ಇನ್ನು ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇನ್ನು ಲಕ್ಷ್ಯ ಥಾಮಸ್ ಕಪ್ ಟ್ರೋಫಿ ಜಯಿಸಿದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು
ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡ ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ:
ಖೇಲ್ ರತ್ನ: ಶರತ್ ಕಮಲ್
ಅರ್ಜುನ ಪ್ರಶಸ್ತಿ: ಸೀಮಾ ಪೂನಿಯಾ(ಅಥ್ಲೆಟಿಕ್ಸ್), ಎಲ್ಡೋಸ್ ಪೌಲ್(ಅಥ್ಲೆಟಿಕ್ಸ್), ಅವಿನಾಶ್ ಸಾಬ್ಲೆ(ಅಥ್ಲೆಟಿಕ್ಸ್), ಲಕ್ಷ್ಯ ಸೆನ್(ಬ್ಯಾಡ್ಮಿಂಟನ್), ಅಮಿತ್ ಫಂಗಾಲ್(ಬಾಕ್ಸಿಂಗ್), ನಿಖಾತ್ ಜರೀನ್(ಬಾಕ್ಸಿಂಗ್), ಭಕ್ತಿ ಕುಲಕರ್ಣಿ(ಚೆಸ್), ಆರ್. ಪ್ರಜ್ಞಾನಂದ(ಚೆಸ್), ದೀಪ್ ಗ್ರೇಸ್ ಎಕ್ಕಾ(ಹಾಕಿ), ಸುಶೀಲಾ ದೇವಿ(ಜೂಡೊ), ಸಾಕ್ಷಿ ಕುಮಾರಿ(ಕಬಡ್ಡಿ), ನಯನ್ ಮೋನಿ ಸೈಕಿಯ(ಲಾನ್ ಬಾಲ್ಸ್), ಸಾಗರ್ ಓಹಾಲ್ಕರ್(ಮಲ್ಲಕಂಬ), ಎಲವೇನಿಲ್ ವಲರಿವನ್(ಶೂಟಿಂಗ್), ಓಂ ಪ್ರಕಾಶ್ ಮಿಥುರ್‌ವಲ್(ಶೂಟಿಂಗ್), ಶ್ರೀಜಾ ಅಕುಲ(ಟೇಬಲ್ ಟೆನಿಸ್), ವಿಕಾಸ್ ಠಾಕೂರ್(ವೇಟ್‌ಲಿಫ್ಟಿಂಗ್), ಪರ್ವೀನ್(ವುಶೂ), ಮಾನಸಿ ಜೋಶಿ(ಪ್ಯಾರಾ ಬ್ಯಾಡ್ಮಿಂಟನ್), ತರುಣ್ ದಿಲ್ಹೋನ್(ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಪಾಟೀಲ್(ಪ್ಯಾರಾ ಸ್ವಿಮ್ಮಿಂಗ್), ಜರ್ಲಿನ್ ಅನಿಕಾ(ಡೆಫ್ ಬ್ಯಾಡ್ಮಿಂಟನ್)