Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ..!
34ನೇ ವಸಂತಕ್ಕೆ ಕಾಲಿರಿಸಿದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂತು ಶುಭಾಶಯಗಳ ಮಹಾಪೂರ
ಸದ್ಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ವಿರಾಟ್ ಕೊಹ್ಲಿ
ಬೆಂಗಳೂರು(ನ.05): ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಶನಿವಾರ(ನ.05)ವಾದ ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.
ಭಾರತ ಕ್ರಿಕೆಟ್ ತಂಡದ ರನ್ ಮಷೀನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, 477 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 24,350 ರನ್ ಬಾರಿಸಿದ್ದು, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಮೂರಂಕಿ ಮೊತ್ತ ಗಳಿಸಲು ವಿಫಲವಾಗುತ್ತಾ ಬಂದಿದ್ದ ವಿರಾಟ್ ಕೊಹ್ಲಿ, ಕೆಲ ತಿಂಗಳ ಹಿಂದಷ್ಟೇ ಯುಎಇನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ದ ಶತಕ ಸಿಡಿಸಿದ ಬಳಿಕ ಮತ್ತೆ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ.
Virat Kohli: ವರ್ಷಗಳ ಬಳಿಕ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಿರಾಟ್ ಕೊಹ್ಲಿ ನಾಮಿನೇಷನ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್ ಕೊಹ್ಲಿಗೆ ಆರ್‌ಸಿಬಿ ವಿನೂತನವಾಗಿ ಶುಭ ಹಾರೈಸಿದೆ. ಹುಟ್ಟುಹಬ್ಬದ ಶುಭಾಶಯಗಳು G.O.A.T. ವಿಶ್ವಕ್ರಿಕೆಟ್‌ನ ಅತ್ಯಂತ ನಿರ್ಭೀತ ಆಟಗಾರ. ನಮ್ಮ ವಿರಾಟ ರಾಜ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ 102 ಟೆಸ್ಟ್ ಪಂದ್ಯಗಳನ್ನಾಡಿ 49.05ರ ಬ್ಯಾಟಿಂಗ್ ಸರಾಸರಿಯಲ್ಲಿ 27 ಶತಕ ಹಾಗೂ 28 ಅರ್ಧಶತಕ ಸಹಿತ 8,074 ರನ್ ಬಾರಿಸಿದ್ದಾರೆ. ಇನ್ನು 262 ಏಕದಿನ ಪಂದ್ಯಗಳನ್ನಾಡಿ 57.7ರ ಬ್ಯಾಟಿಂಗ್ ಸರಾಸರಿಯಲ್ಲಿ 12,344 ರನ್ ಬಾರಿಸಿದ್ದು, ಇದರಲ್ಲಿ 43 ಶತಕ ಹಾಗೂ 64 ಅರ್ಧಶತಕಗಳು ಸೇರಿವೆ. ಟೆಸ್ಟ್ ಹಾಗೂ ಏಕದಿನ ಮಾತ್ರವಲ್ಲದೇ ವಿರಾಟ್ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲೂ ಭಾರತ ಪರ ಅಮೋಘ ಪ್ರದರ್ಶನ ತೋರಿದ್ದು, 113 ಪಂದ್ಯಗಳಿಂದ 53.1ರ ಬ್ಯಾಟಿಂಗ್ ಸರಾಸರಿಯಲ್ಲಿ 1 ಶತಕ ಹಾಗೂ 36 ಅರ್ಧಶತಕ ಸಹಿತ 3,932 ರನ್ ಬಾರಿಸಿ ಮಿಂಚಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನಷ್ಟೇ ಪ್ರತಿನಿಧಿಸುತ್ತಾ ಬಂದಿರುವ ಕಿಂಗ್ ಕೊಹ್ಲಿ, ಒಟ್ಟು 223 ಐಪಿಎಲ್ ಪಂದ್ಯಗಳನ್ನಾಡಿ 36.2ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಶತಕ ಹಾಗೂ 44 ಅರ್ಧಶತಕ ಸಹಿತ 6,624 ರನ್ ಬಾರಿಸಿ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯರೆನಿಸಿಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹಿರಿ-ಕಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಉಮೇಶ್ ಯಾದವ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಕ್ರೀಡಾ ತಾರೆಯರು ಶುಭಕೋರಿದ್ದಾರೆ.