ಅಮೇರಿಕಾ ಟೆನಿಸ್ ಟಾರೆ ಸೆರೆನಾ ವಿಲಿಯಮ್ಸ್ ಎದುರಾಳಿಗಳಿಗೆ ಕಣ್ಣೀರುತರಿಸಿದ್ದೇ ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ಸೆರೆನಾ ತಮ್ಮ ಕಣ್ಣಾಲಿಗಳು ಒದ್ದೆಯಾದ ಘಟನೆಯನ್ನ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸೆರೆನಾ ವಿಲಿಯಮ್ಸ್‌ಗೆ ಕಣ್ಣೀರು ತರಿಸಿದ ಆ ಘಟನೆ ಯಾವುದು? ಇಲ್ಲಿದೆ ವಿವಿರ.
ಲಂಡನ್(ಜು.08): ಟೆನಿಸ್ ಜಗತ್ತಿನಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿ ಪ್ರಶಸ್ತಿ ಮೇಲೆ ಪ್ರಶಸ್ತಿ ಬಾಚಿಕೊಂಡ ಅಮೇರಿಕಾದ ಸೆರೆನಾ ವಿಲಿಯಮ್ಸ್ ತಮ್ಮ ಬೇಸರವನ್ನ ತೋಡಿಕೊಂಡಿದ್ದಾರೆ. ತಾಯಿಯಾದ ಬಳಿಕ ಮೊದಲ ಬಾರಿ ಗ್ರ್ಯಾಂಡ್‌ಸ್ಲಾಂ ಗೆಲುವು ಸಾಧಿಸಲು ಹೋರಾಡುತ್ತಿರುವ ಸೆರೆನಾ ವಿಲಿಯಮ್ಸ್, ತಮ್ಮ ಮಗಳು ಒಲಿಂಪಿಯಾ ಮೊದಲ ಬಾರಿಗೆ ಹೆಜ್ಜೆಯಿಟ್ಟಿದ್ದನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಬೇಸರಗೊಂಡಿದ್ದಾರೆ.
‘ಮಗಳು ಮೊದಲ ಬಾರಿಗೆ ಹೆಜ್ಜೆಯಿಡುತ್ತಾ ನಡೆಯಲು ಯತ್ನಿಸಿದಳು ಎಂದು ತಿಳಿಯಿತು. ಆದರೆ ನಾನು ಆಗ ಅಭ್ಯಾಸಕ್ಕಾಗಿ ತೆರಳಿದ್ದೆ. ಆ ಸುಂದರ ಕ್ಷಣವನ್ನು ನೋಡಲು ಸಾಧ್ಯವಾಗಲಿಲ್ಲ. ನನ್ನ ಕಣ್ಣಾಲಿಗಳು ಒದ್ದೆಯಾದವು’ ಎಂದು ಸೆರೆನಾ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ ಸೆರನಾ, ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ ಕ್ರಿಸ್ಟಿನಾ ಮೆಡಿನೋವಿಚ್ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆದರು.
