ಮಕಾವು(ನ.28): ಮಕಾವು ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ ಶಟ್ಲರ್ ಮತ್ತು ಒಲಿಂಪಿಕ್ ಕೂಟದ ರಜತ ಪದಕ ವಿಜೇತೆ ಭಾರತದ ಪಿ.ವಿ. ಸಿಂಧು, 4ನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಎರಡು ವಾರಗಳಲ್ಲಿ ಚೊಚ್ಚಲ ಚೀನಾ ಓಪನ್ ಮತ್ತು ಹಾಂಕಾಂಗ್ ಓಪನ್‌ನ ಫೈನಲ್‌'ಗೆ ತಲುಪುವ ಮೂಲಕ ರನ್ನರ್‌'ಅಪ್ ಪ್ರಶಸ್ತಿ ಜಯಿಸಿದ ಸಿಂಧು ಮಕಾವು ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಬುಧವಾರ ನಡೆಯುವ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸಿಂಧು, ಚೀನಾದ ಯು ಹನ್ ಎದುರು ಸೆಣಸಲಿದ್ದಾರೆ. ಒಲಿಂಪಿಕ್ಸ್ ಕೂಟದ ನಂತರ ಸಾಲು ಸಾಲಾಗಿ ಪ್ರಶಸ್ತಿ ಸುತ್ತಿನಲ್ಲಿ ಸೆಣಸುತ್ತಾ ಶ್ರೇಯಾಂಕದಲ್ಲಿ ಮೇಲುಗೈ ಸಾಧಿಸುತ್ತಾ ಬಂದಿರುವ ಸಿಂಧು ಮಕಾವು ಓಪನ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಮತ್ತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಒಲಿಂಪಿಕ್ಸ್‌ನಲ್ಲಿ ಮಂಡಿನೋವಿಗೆ ತುತ್ತಾಗುವ ಮೂಲಕ ಕಳೆದ 3 ತಿಂಗಳಿಂದ ಬಳಲಿಕೆಯಲ್ಲಿದ್ದಾರೆ. ಚೇತರಿಸಿಕೊಂಡು ಬಂದರೂ ಮತ್ತೆ ನೋವು ಕಾಣಿಸಿಕೊಂಡು ಟೂರ್ನಿಯಿಂದ ಬೇಗನೇ ಹೊರಬೀಳುತ್ತಿದ್ದಾರೆ.

ಆಗಸ್ಟ್‌ನಲ್ಲಷ್ಟೇ ಮಂಡಿ ನೋವಿಗೆ ಶಸ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ತಮ್ಮ ಕೋಚ್ ವಿಮಲ್ ಕುಮಾರ್ ಅವರ ಬಳಿ ತರಬೇತಿ ಪಡೆದು ಚೀನಾ ಓಪನ್‌ಗಾಗಿ ತಂಡಕ್ಕೆ ಮರಳಿದ್ದರು. ಮೊದಲ ಸುತ್ತಿನಲ್ಲಿ ಸೋಲುಂಡು ನಿರಾಸೆಯಿಂದ ಹೊರಬಿದ್ದಿದ್ದರು. ಹಾಂಕಾಂಗ್ ಓಪನ್‌ನಲ್ಲಿ ಸೈನಾ ಕ್ವಾರ್ಟರ್‌ ಫೈನಲ್ ಸನಿಹ ಎಡವಿದರು. ಮಕಾವು ಟೂರ್ನಿಯಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ, ಇಂಡೋನೇಷಿಯಾದ ಹನ್ನಾ ರಾಮ್ದಿನಿ ಅವರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಜೋಡಿ ಹಾಂಕಾಂಗ್‌ನ ಚಾನ್ ಅಲನ್ ಯನ್ ಲಂಗ್ ಮತ್ತು ಲಿ ಕ್ಯುನ್ ಹನ್ ಜೋಡಿ ಎದುರು ಸೆಣಸಲಿದೆ. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಮನು ಅತ್ರಿ ಜೋಡಿ ಇಂಡೋನೇಷಿಯಾದ ಸತ್ರಾ ಅದಿತಾ ಮತ್ತು ಅಪಿರ್ಲಾಸಸಿ ಪುಟ್ರಿ ಜೋಡಿಯನ್ನು ಎದುರಿಸಲಿದೆ.