ವಿಶ್ವದ ನಾಲ್ಕನೇ ಶ್ರೇಯಾಂಕಿತೆಯ ವಿರುದ್ಧ ಈ ಹಿಂದಿನ ಒಟ್ಟಾರೆ ಐದು ಮುಖಾಮುಖಿಯಲ್ಲಿ 3-2ರಿಂದ ಮುನ್ನಡೆ ಸಾಧಿಸಿದ್ದ ಎಂಟನೇ ಶ್ರೇಯಾಂಕಿತೆ ಸಿಂಧು, ಈ ಬಾರಿ ಎಡವಿದರು.

ದುಬೈ(ಡಿ.17): ಹೆಜ್ಜೆ ಹೆಜ್ಜೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಟ್ಟಕಡೆಯವರೆಗೂ ಹೋರಾಟ ನಡೆಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಋತುವಿನ ಕೊನೆಯ ಟೂರ್ನಿಯಾದ ವಿಶ್ವ ಸೂಪರ್ ಸಿರೀಸ್ ಫೈನಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್‌'ನಲ್ಲಿ ಮುಗ್ಗರಿಸಿದರು.

ಇಲ್ಲಿನ ಹ್ಯಾಮ್ಡನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಉಪಾಂತ್ಯದ ಕಾದಾಟದಲ್ಲಿ ದ.ಕೊರಿಯಾ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧದ ಮೊದಲ ಗೇಮ್‌'ನಲ್ಲಿ ಅನುಭವಿಸಿದ ಹಿನ್ನಡೆಯನ್ನು ಮೆಟ್ಟಿನಿಂತರೂ, ನಿರ್ಣಾಯಕವಾಗಿದ್ದ ಗೇಮ್‌ನಲ್ಲಿ ಕೊರಿಯಾ ಆಟಗಾರ್ತಿಯ ಪ್ರಭಾವಿ ಹೋರಾಟಕ್ಕೆ ಸರಿಸಾಟಿಯಾಗಿ ನಿಲ್ಲದೆ ಹೋದರು. ಅಂತಿಮವಾಗಿ 15-21, 21-18 ಹಾಗೂ 21-15ರಿಂದ ಸಿಂಧು ಹಿನ್ನಡೆ ಅನುಭವಿಸಿದರು. ಅಲ್ಲಿಗೆ ರಿಯೊ ಒಲಿಂಪಿಕ್‌'ನ ಬೆಳ್ಳಿ ಪದಕದ ಒಡತಿಯ ಈ ಋತುವಿನ ವೈಭವೋಪೇತ ಅಧ್ಯಾಯಕ್ಕೂ ತೆರೆಬಿದ್ದಿತು.

ವಿಶ್ವದ ನಾಲ್ಕನೇ ಶ್ರೇಯಾಂಕಿತೆಯ ವಿರುದ್ಧ ಈ ಹಿಂದಿನ ಒಟ್ಟಾರೆ ಐದು ಮುಖಾಮುಖಿಯಲ್ಲಿ 3-2ರಿಂದ ಮುನ್ನಡೆ ಸಾಧಿಸಿದ್ದ ಎಂಟನೇ ಶ್ರೇಯಾಂಕಿತೆ ಸಿಂಧು, ಈ ಬಾರಿ ಎಡವಿದರು. ಶುರುವಿನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಗೇಮ್ ವಶಕ್ಕೆ ಪಡೆದ ಕೊರಿಯಾ ಆಟಗಾರ್ತಿಯ ವಿರುದ್ಧ ಎರಡನೇ ಗೇಮ್‌ನಲ್ಲಿ ಪ್ರಬಲವಾಗಿ ತಿರುಗಿಬಿದ್ದು 1-1 ಸಮಬಲ ಸಾಧಿಸಿದರು. ಆದರೆ, ಮೂರನೇ ಗೇಮ್‌ನಲ್ಲಿ ಶುರುವಿನಲ್ಲೇ 3-0 ಮುನ್ನಡೆಯೊಂದಿಗೆ ಸಾಗಿದ ಸುಂಗ್, ಒಂದು ಹಂತದಲ್ಲಿ ಪ್ರತ್ಯಾಕ್ರಮಣದ ಕುರುಹು ನೀಡಿದ ಸಿಂಧುವನ್ನು ಒತ್ತಡದಲ್ಲಿ ಸಿಲುಕಿಸಿ ಜಯಭೇರಿ ಬಾರಿಸುವಲ್ಲಿ ಸಫಲವಾದರು.