Asianet Suvarna News Asianet Suvarna News

ಈ ಬಾರಿಯ ಐಪಿಎಲ್ ಯಾರು ಗೆಲ್ತಾರೆ? ಖ್ಯಾತ ವೈಜ್ಞಾನಿಕ ಜ್ಯೋತಿಷಿಯಿಂದ ಭವಿಷ್ಯ..!

ವೈಜ್ಞಾನಿಕ ಜ್ಯೋತಿಷಿ ಗ್ರೀನ್'ಸ್ಟೋನ್ ಲೋಬೋ ಪ್ರಕಾರ, ಆರ್'ಸಿಬಿ ಮತ್ತು ಗುಜರಾತ್ ಲಯನ್ಸ್ ತಂಡಗಳು ಫೈನಲ್ ಪ್ರವೇಶಿಸಬಹುದು. ಕೊಹ್ಲಿ ಪಡೆ ಚಾಂಪಿಯನ್ ಆಗಬಹುದು. ಹೈದರಾಬದ್ ಸನ್'ರೈಸರ್ಸ್ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು.

scientific astrologer greenstone lobo predicts ipl winners

ನವದೆಹಲಿ(ಏ. 04): ಐಪಿಎಲ್ ಅಂದ್ರೆ ಭಾರತೀಯರಿಗೆ ಕ್ರಿಕೆಟ್ ಹಬ್ಬ. ಒಂದೂವರೆ ತಿಂಗಳು ಕಲರ್'ಫುಲ್ ಕ್ರಿಕೆಟ್. ತಮ್ಮ ತಂಡ ಗೆಲ್ಲಲಿ ಎಂದು ಎಂಟು ತಂಡಗಳ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಾರೆ. ಕದ್ದುಮುಚ್ಚಿ ಬಲುಜೋರಾಗಿ ಬೆಟ್ಟಿಂಗ್'ಗಳೂ ನಡೆಯುತ್ತವೆ. ಇಂಥ ಹೈಪ್ರೊಫೈಲ್ ಟೂರ್ನಿ ಬಗ್ಗೆ ಜ್ಯೋತಿಷಿಗಳ ಭವಿಷ್ಯ ಇಲ್ಲದಿದ್ದರೆ ಹೇಗೆ? ಖ್ಯಾತ ವೈಜ್ಞಾನಿಕ ಜ್ಯೋತಿಷಿ ಎನಿಸಿರುವ ಗ್ರೀನ್'ಸ್ಟೋನ್ ಲೋಬೋ ಅವರು ಈ ಸೀಸನ್'ನ ಐಪಿಎಲ್ ಭವಿಷ್ಯವನ್ನು ಹಿಡಿಹಿಡಿಯಾಗಿ ಬಿಚ್ಚಿಟ್ಟಿದ್ದಾರೆ. ತಂಡದ ನಾಯಕ ಹಾಗೂ ಸಹ-ಆಟಗಾರರ ಜಾತಕವನ್ನಾಧರಿಸಿ ಅವರು ಗೆಲುವಿನ ಮತ್ತು ಸೋಲಿನ ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ.

ಟೂರ್ನಿ ಗೆಲ್ಲಲು ಯಾರಾರಿಗೆ ಸಾಧ್ಯವಿಲ್ಲ?
ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರೈಸಿಂಗ್ ಪುಣೆ ಸೂಪರ್'ಜೇಂಟ್ಸ್, ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಈ ಬಾರಿಯ ಐಪಿಎಲ್ ಗೆಲ್ಲುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳ್ತಾರೆ ಲೋಬೋ.

ಯಾಕೆ ಸಾಧ್ಯವಿಲ್ಲ?
ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಾಯಕರಾದ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ಅವರು ಈಗಾಗಲೇ ಎರಡು ಬಾರಿ ಐಪಿಎಲ್ ಟೂರ್ನಿಗಳನ್ನು ಗೆದ್ದಿದ್ದಾರೆ. ಅವರ ಜಾತಕದ ಪ್ರಕಾರ ಎರಡಕ್ಕಿಂತ ಹೆಚ್ಚು ಐಪಿಎಲ್ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ, ಅವರ ತಂಡಗಳಿಗೆ ಚಾಂಪಿಯನ್ ಸಾಧ್ಯತೆ ಇಲ್ಲವೇ ಇಲ್ಲ. ಈ ತಂಡಗಳಲ್ಲಿರುವ ಯೂಸುಫ್ ಪಠಾಣ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಮಿಶೆಲ್ ಜಾನ್ಸನ್, ಲಸಿತ್ ಮಾಲಿಂಗ ಮತ್ತು ಹರ್ಭಜನ್ ಸಿಂಗ್ ಅವರು ತಮ್ಮ ತಂಡಗಳನ್ನು ಗೆಲ್ಲಿಸಿಕೊಡುವಷ್ಟು ಕ್ಷಮತೆ ಉಳಿಸಿಕೊಂಡಿಲ್ಲ ಎಂದು ಲೋಬೋ ಹೇಳ್ತಾರೆ.

ಇನ್ನು, ಪುಣೆ ಮತ್ತು ಪಂಜಾಬ್ ತಂಡಗಳ ನಾಯಕರಾದ ಸ್ಟೀವನ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್'ವೆಲ್ ಅವರ ಜಾತಕ ಸದ್ಯಕ್ಕೆ ಬೇರೆ ನಾಯಕರಿಗೆ ಹೋಲಿಸಿದರೆ ಪ್ರಬಲವಾಗಿಲ್ಲ. ಪುಣೆ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಜಾತಕ ಇನ್ನೂ ಅಧ್ವಾನವಾಗಿದೆ. ಅವರನ್ನ ಕೈಬಿಟ್ಟಿದ್ದರೆ ತಂಡದ ಅದೃಷ್ಟ ಸ್ವಲ್ಪವಾದರೂ ಏರುತ್ತಿತ್ತಂತೆ.

ಅದೇ ರೀತಿ, ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಸೆಹ್ವಾಗ್ ಬದಲು ಆಂಗ್ಲ ಕ್ರಿಕೆಟಿಗ ಇಯಾನ್ ಮಾರ್ಗನ್ ಅವರನ್ನ ಆರಿಸಿದ್ದರೆ ಅದೃಷ್ಟ ಖುಲಾಯಿಸುತ್ತಿತ್ತು ಎಂದು ಜ್ಯೋತಿಷಿ ಅಭಿಪ್ರಾಯಪಡುತ್ತಾರೆ.

ಯಾರಿಗೆ ಗೆಲುವಿನ ಸಾಧ್ಯತೆ?
ಇನ್ನುಳಿದ ನಾಲ್ಕು ತಂಡಗಳಾದ ಆರ್'ಸಿಬಿ, ಗುಜರಾತ್ ಲಯನ್ಸ್, ಹೈದರಾಬಾದ್ ಸನ್'ರೈಸರ್ಸ್ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ಈ ಬಾರಿಯ ಐಪಿಎಲ್ ಗೆಲ್ಲುವ ಅವಕಾಶಗಳನ್ನು ಹೊಂದಿವೆಯಂತೆ. ಆರ್'ಸಿಬಿ ವಿನ್ನರ್ ಮತ್ತು ಗುಜರಾತ್ ಲಯನ್ಸ್ ರನ್ನರ್'ಅಪ್ ಆಗಬಹುದು ಎಂದು ಲೋಬೋ ಭವಿಷ್ಯ ನುಡಿಯುತ್ತಾರೆ.

ಡೆಲ್ಲಿ ಡೇರ್'ಡೆವಿಲ್ಸ್:
ಡೆಲ್ಲಿ ತಂಡದ ನಾಯಕ ಜಹೀರ್ ಖಾನ್ ಅವರ ಗ್ರಹಗತಿ ಉತ್ತಮವಾಗಿದೆ. ಆದರೆ, ಸಹ ಆಟಗಾರರ ಜಾತಕದಲ್ಲಿ ಮಿಶ್ರಫಲವಿದೆ. ಆದರೆ, ಕೋಚ್ ಪ್ಯಾಡಿ ಅಪ್ಟನ್ ಮತ್ತು ಮೆಂಟರ್ ರಾಹುಲ್ ದ್ರಾವಿಡ್ ಅವರ ಜಾತಕಗಳು ಅತ್ಯುತ್ತಮವಾಗಿರುವುದರಿಂದ ಡೆಲ್ಲಿ ತಂಡಕ್ಕೆ ಗೆಲುವಿನ ಮಾಲೆ ಸಿಗುವ ಚಾನ್ಸಸ್ ಜಾಸ್ತಿಯಂತೆ.

ಹೈದರಾಬಾದ್ ಸನ್'ರೈಸರ್ಸ್:
ಹಾಲಿ ಚಾಂಪಿಯನ್ ಎನ್ನುವ ಕಾರಣಕ್ಕೆ ಹೈದರಾಬಾದ್ ತಂಡಕ್ಕೆ ಈ ಬಾರಿ ಫುಲ್ ಲಕ್ ಸಿಕ್ಕೋದಿಲ್ಲವಂತೆ. ಡೇವಿಡ್ ವಾರ್ನರ್ ಅವರ ಜಾತಕ ಅದ್ಭುತವಾಗಿದೆ. ಇದು ಅವರ ತಂಡವನ್ನು ಫೈನಲ್'ಗೆ ಕರೆದೊಯ್ದರೂ ಒಯ್ಯಬಹುದು.

ಆರ್'ಸಿಬಿ ದಿ ಬೆಸ್ಟ್:
ಐಪಿಎಲ್ ಕ್ಯಾಪ್ಟನ್'ಗಳ ಪೈಕಿ ಆರ್'ಸಿಬಿ ನಾಯಕ ವಿರಾಟ್ ಕೊಹ್ಲಿಯವರ ಜಾತಕ ಅತ್ಯುತ್ತಮವಾಗಿದೆ. ಹೈದರಾಬಾದ್'ನ ಡೇವಿಡ್ ವಾರ್ನರ್'ಗಿಂತಲೂ ಕೊಹ್ಲಿಯದ್ದು ಬೆಸ್ಟ್ ಎನ್ನುತ್ತಾರೆ ಲೋಬೋ. ಕೊಹ್ಲಿಯಷ್ಟೇ ಅಲ್ಲ, ಕ್ರಿಸ್ ಗೇಲ್, ಸರ್ಫರಾಜ್ ಆದಿಯಾಗಿ ತಂಡದ ಬಹುತೇಕ ಆಟಗಾರರ ಜಾತಕ ಚೆನ್ನಾಗಿದೆಯಂತೆ. ಎಲ್ಲಾ ಐಪಿಎಲ್ ತಂಡಗಳ ಆಟಗಾರರ ಕಾಂಬಿನೇಶನ್'ಗಿಂತ ಆರ್'ಸಿಬಿಯದ್ದು ಬೆಸ್ಟ್. ಆರಂಭದ ಕೆಲ ಪಂದ್ಯಗಳನ್ನು ಆಡದ ಕೊಹ್ಲಿ, ಮುಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಳೆದುಕೊಂಡಿದ್ದ ಫಾರ್ಮನ್ನು ಕೊಹ್ಲಿ ಸಂಪೂರ್ಣವಾಗಿ ಮರಳಿಪಡೆಯಲಿದ್ದಾರೆ. ಅಲ್ಲದೇ, ಆರ್'ಸಿಬಿ ಕೋಚ್ ಡೇನಿಯಲ್ ವೆಟ್ಟೋರಿ ಅವರ ಜಾತಕದಲ್ಲಿ ಪ್ರಮುಖ ಟೂರ್ನಿಯನ್ನು ಗೆಲ್ಲುವ ಸಾಧ್ಯತೆ ಕಾಣುತ್ತಿದೆ.

ಗುಜರಾತ್ ಲಯನ್ಸ್:
ತಂಡದ ಕ್ಯಾಪ್ಟನ್ ಸುರೇಶ್ ರೈನಾ ಜಾತಕ ಬಹಳ ಚೆನ್ನಾಗಿದೆ. ಕೊಹ್ಲಿ ಬಿಟ್ಟರೆ ಅವರ ಜಾತಕವೇ ಬೆಸ್ಟ್. ಡೇವಿಡ್ ವಾರ್ನರ್'ರದ್ದಕ್ಕಿಂತಲೂ ಚೆನ್ನಾಗಿದೆ. ಹೀಗಾಗಿ, ಲಯನ್ಸ್ ಕನಿಷ್ಠ ಫೈನಲ್'ವರೆಗಾದರೂ ಏರಬಹುದು.

ಒಟ್ಟಿನಲ್ಲಿ ವೈಜ್ಞಾನಿಕ ಜ್ಯೋತಿಷಿ ಗ್ರೀನ್'ಸ್ಟೋನ್ ಲೋಬೋ ಪ್ರಕಾರ, ಆರ್'ಸಿಬಿ ಮತ್ತು ಗುಜರಾತ್ ಲಯನ್ಸ್ ತಂಡಗಳು ಫೈನಲ್ ಪ್ರವೇಶಿಸಬಹುದು. ಕೊಹ್ಲಿ ಪಡೆ ಚಾಂಪಿಯನ್ ಆಗಬಹುದು. ಹೈದರಾಬದ್ ಸನ್'ರೈಸರ್ಸ್ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು.

Follow Us:
Download App:
  • android
  • ios