ಸ್ವಿಸ್ ಓಪನ್ ಗೆದ್ದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ -ಚಿರಾಗ್ ಶೆಟ್ಟಿ ಜೋಡಿ!
ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಡಿಗೇರಿಸಿಕೊಂಡ ಭಾರತದ ಜೋಡಿ
2023ರ ಋುತುವಿನಲ್ಲಿ ಭಾರತಕ್ಕೆ ಮೊದಲ ಪ್ರಶಸ್ತಿ
ಚೀನಾದ ಜೋಡಿ ಎದುರು ಗೆದ್ದು ಬೀಗಿದ ಚಿರಾಗ್-ಸಾತ್ವಿಕ್ ಹೊಂದಾಣಿಕೆಯ ಆಟ
ಬಸೆಲ್(ಮಾ.27): ಭಾರತದ ತಾರಾ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಭಾನುವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತೀಯ ಜೋಡಿಯು ಚೀನಾದ ರೆನ್ ಕ್ಸಿಯಾಂಗ್ ಯು ಹಾಗೂ ಟಾನ್ ಕ್ಸಿಯಾಂಗ್ ವಿರುದ್ಧ 21-19, 24-22 ಗೇಮ್‌ಗಳಲ್ಲಿ ಜಯಗಳಿಸಿತು.
54 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವ ನಂ.21 ಜೋಡಿಯನ್ನು ಸಾತ್ವಿಕ್ ಹಾಗೂ ಚಿರಾಗ್ ತಮ್ಮ ಬಲಿಷ್ಠ ಡಿಫೆನ್ಸ್ ಹಾಗೂ ಆಕ್ರಮಣಕಾರಿ ರಿಟರ್ನ್‌ಗಳ ಮೂಲಕ ಮಣಿಸಿ, 2023ರಲ್ಲಿ ಭಾರತಕ್ಕೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟರು. ಸಾತ್ವಿಕ್ ಹಾಗೂ ಚಿರಾಗ್ ಜೋಡಿಗೆ ಇದು ಒಟ್ಟಾರೆ 5ನೇ ಪ್ರಶಸ್ತಿ. ಕಳೆದ ವರ್ಷ ಇಂಡಿಯಾ ಓಪನ್, ಫ್ರೆಂಚ್ ಓಪನ್, 2018ರಲ್ಲಿ ಹೈದ್ರಾಬಾದ್ ಓಪನ್, 2019ರಲ್ಲಿ ಥಾಯ್ಲೆಂಡ್ ಓಪನ್ ಪ್ರಶಸ್ತಿಗಳನ್ನು ಈ ಜೋಡಿ ಗೆದ್ದಿತ್ತು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸಾತ್ವಿಕ್-ಚಿರಾಗ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ನಿಖಾತ್, ಲವ್ಲೀನಾಗೆ ವಿಶ್ವ ಬಾಕ್ಸಿಂಗ್ ಕಿರೀಟ
ನವದೆಹಲಿ: ಹಲವು ವರ್ಷಗಳ ಬಳಿಕ ಭಾರತೀಯ ಮಹಿಳಾ ಬಾಕ್ಸರ್ಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದು, 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಿಖಾತ್ ಜರೀನ್ ಹಾಗೂ ಲವ್ಲೀನಾ ಬೋರ್ಗೋಹೈನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. ಶನಿವಾರ ನೀತು ಗಂಗಾಸ್, ಸ್ವೀಟಿ ಬೋರಾ ಬಂಗಾರ ಗೆದ್ದಿದ್ದರು.
ಕಳೆದ ಆವೃತ್ತಿಯಲ್ಲೂ ಚಾಂಪಿಯನ್ ಆಗಿದ್ದ ನಿಖಾತ್ 50 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ವಿಯೆಟ್ನಾಂನ ನ್ಯುಯೆನ್ ಟಾಮ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಟೂರ್ನಿಯುದ್ದಕ್ಕೂ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದ ಜರೀನ್ ಫೈನಲ್ನಲ್ಲೂ ನಿರೀಕ್ಷಿತ ಆಟವಾಡಿ ಚಾಂಪಿಯನ್ ಪಟ್ಟತಮ್ಮಲ್ಲೇ ಉಳಿಸಿಕೊಂಡರು. ಇನ್ನು ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಆಸ್ಪ್ರೇಲಿಯಾದ ಕ್ಯಾಟ್ಲಿನ್ ಪಾರ್ಕರ್ ವಿರುದ್ಧ 5-2ರಲ್ಲಿ ಗೆದ್ದು ಚೊಚ್ಚಲ ವಿಶ್ವಚಾಂಪಿಯನ್ ಪಟ್ಟಅಲಂಕರಿಸಿದರು.
ಸತತ 2 ಚಿನ್ನ ಗೆದ್ದ: ನಿಖಾತ್ ದಾಖಲೆ: ಮಹಿಳಾ ವಿಶ್ವಚಾಂಪಿಯನ್ಶಿಪ್ನಲ್ಲಿ ಸತತ 2 ಚಿನ್ನ ಗೆದ್ದ 2ನೇ ಬಾಕ್ಸರ್ ಎಂಬ ಖ್ಯಾತಿಗೆ ನಿಖಾತ್ ಪಾತ್ರರಾಗಿದ್ದಾರೆ. ಈ ಮೊದಲು ಮೇರಿ ಕೋಮ್ 2002, 2005, 2006, 2010, 2018ರಲ್ಲಿ ಚಿನ್ನ ಪಡೆದಿದ್ದರು.
RCB Unbox ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಆರ್‌ಸಿಬಿ ಫ್ಯಾನ್ಸ್..!
2006ರ ದಾಖಲೆ ಸಮ: ಭಾರತ ಈ ಬಾರಿ 4 ಚಿನ್ನದ ಪದಕ ಗೆದ್ದಿದ್ದು, 2006ರ ದಾಖಲೆಯನ್ನು ಸರಿಗಟ್ಟಿತು. 2006ರಲ್ಲಿ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ, ಲೇಖಾ ಕೆ.ಸಿ. ಚಾಂಪಿಯನ್ ಆಗಿದ್ದರು.
ಮಹಿಳಾ ವೇಟ್‌ಲಿಫ್ಟಿಂಗ್: ನಿರುಪಮಾಗೆ ಚಿನ್ನ
ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರಾರಯಂಕಿಂಗ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರೈಲ್ವೇಸ್ನ ನಿರುಪಮಾ, ಪಂಜಾಬ್ನ ಹರ್ಜಿಂದರ್ ಕೌರ್ ಚಿನ್ನ ಗೆದ್ದರು. ಹಿರಿಯರ ವಿಭಾಗದಗ 64 ಕೆ.ಜಿ. ಸ್ಪರ್ಧೆಯಲ್ಲಿ ನಿರುಪಮಾ 192 ಕೆ.ಜಿ. ಭಾರ ಎತ್ತಿದರೆ, 71 ಕೆ.ಜಿ. ಸ್ಪರ್ಧೆಯಲ್ಲಿ ಕೌರ್ 197 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು. ಕಿರಿಯರ ವಿಭಾಗದಲ್ಲಿ ಆಂಧ್ರದ ಪಲ್ಲವಿ(64 ಕೆ.ಜಿ.), ಉತ್ತರಪ್ರದೇಶದ ಸೃಷ್ಟಿ(71 ಕೆ.ಜಿ.) ಕೂಡಾ ಬಂಗಾರ ತಮ್ಮದಾಗಿಸಿಕೊಂಡರು.
18ಕೆ ಮ್ಯಾರಥಾನ್ ಓಟ ಯಶಸ್ವಿ
ಬೆಂಗಳೂರು: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ‘ಒನ್ 8’ ಸಂಸ್ಥೆಯ ಸಹಯೋಗದಲ್ಲಿ ಎನ್‌ಇಬಿ ಸ್ಪೋಟ್ಸ್‌ರ್ ಆಯೋಜಿಸಿದ್ದ ದೇಶದ ಮೊದಲ 18 ಕಿ.ಮೀ. ಮ್ಯಾರಥಾನ್ ಓಟ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಓಟಕ್ಕೆ ಕೊಹ್ಲಿ ಚಾಲನೆ ನೀಡಿದರು. ಕೊಹ್ಲಿಯ ಜೆರ್ಸಿ ಸಂಖ್ಯೆ ‘18’ ಅನ್ನು ಮಾದರಿಯಾಗಿಟ್ಟುಕೊಂಡು ಈ ಓಟ ಆಯೋಜಿಸಲಾಗಿತ್ತು. 18 ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಶಿವಂ ಯಾದವ್(59.55 ನಿಮಿಷ), ಮಹಿಳೆಯರ ವಿಭಾಗದಲ್ಲಿ ಆರಾಧನಾ(1 ಗಂಟೆ 11.23 ನಿಮಿಷ) ಮೊದಲ ಸ್ಥಾನ ಪಡೆದರು. ಒಟ್ಟು 8000ಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದರು.