RCB Unbox ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಆರ್‌ಸಿಬಿ ಫ್ಯಾನ್ಸ್..!
ಬೆಂಗಳೂರು(ಮಾ.26): ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು, ಇದೀಗ ಹೊಸ ಜೋಶ್‌ನಲ್ಲಿ ತಮ್ಮ ನೆಚ್ಚಿನ ಬೆಂಗಳೂರು ತಂಡವನ್ನು ಪ್ರೋತ್ಸಾಹಿಸಲು ಸಜ್ಜಾಗಿದ್ದಾರೆ. ಇದೀಗ ಆರ್‌ಸಿಬಿ ಅಭಿಮಾನಿಗಳಿಗಾಗಿಯೇ ಫ್ರಾಂಚೈಸಿಯು RCB Unbox ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾಗಾರೋಪಾದಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಚಿನ್ನಸ್ವಾಮಿ ಮೈದಾನದತ್ತ ಧಾವಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದೆ. ತವರಿನಲ್ಲಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 02ರಂದು ತವರಿನಲ್ಲಿ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಕಳೆದ 15 ಸೀಸನ್‌ನಿಂದಲೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಿದ್ದೂ ಆರ್‌ಸಿಬಿ ತಂಡದ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಲ್ಲಿ ಒಂದಿಂಚು ಕಮ್ಮಿಯಾಗಿಲ್ಲ.
ಇದೀಗ ಇಂದು(ಮಾ.26) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದು, ತಂಡದ ದಿಗ್ಗಜ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್‌ಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದೀಗ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಒಂದೇ ಜೆರ್ಸಿಯಲ್ಲಿರುವುದನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದಾರೆ.
RCB Women's
ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಮಹಿಳಾ ಆರ್‌ಸಿಬಿ ತಂಡ ಕೂಡಾ ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾಜರಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್, ತಮ್ಮ ನೆಚ್ಚಿನ ತಾರೆ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಹತ್ತಿರದಿಂದ ನೋಡುವುದಕ್ಕೆ ಉತ್ಸುಕರಾಗಿದ್ದಾರೆ.
ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂ.17 ಹಾಗೂ ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂ.333 ಅನ್ನು ಶಾಶ್ವತವಾಗಿ ನಿವೃತ್ತಿಗೊಳಿಸಲು ಆರ್‌ಸಿಬಿ ಫ್ರಾಂಚೈಸಿಯು ನಿರ್ಧರಿಸಿದೆ.
ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಸೋನು ನಿಗಮ್, ಜೇಸನ್ ಡೆರುಲೊ ಸೇರಿದಂತೆ ವಿವಿಧ ಬ್ಯಾಂಡ್ಗಳಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 4ರಿಂದ ರಾತ್ರಿ 10ರ ವರೆಗೆ ಅಭ್ಯಾಸ, ಸಂಗೀತ, ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಫ್ರಾಂಚೈಸಿಯು ತಿಳಿಸಿದೆ.