ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯ ವಿರುದ್ಧ ಸೋತರು. ಇದು ಜೋಡಿಯ ಎರಡನೇ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ.

ಪ್ಯಾರಿಸ್: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಂ.1 ಡಬಲ್ಸ್ ಜೋಡಿಯಾದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಕಂಚಿನ ಪದಕ ಗೆಲ್ಲುವುದರೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವ 11ನೇ ಶ್ರೇಯಾಂಕಿತ ಚೈನಿಸ್ ಜೋಡಿ ಚೆನ್‌ ಬೊ ಯಾಂಗ್‌-ಲಿಯು ಯಿ ಎದುರು 19-21, 21-18, 12-21 ಸೆಟ್‌ಗಳಲ್ಲಿ ಸೋಲುವ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಜೋಡಿ ಎರಡನೇ ಬಾರಿಗೆ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.

ಇದಕ್ಕೂ ಮೊದಲು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಖಚಿತಪಡಿಸಿಕೊಂಡಿತು. ಪುರುಷರ ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ಗೇರಿತು. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.3 ಜೋಡಿ ಸಾತ್ವಿಕ್‌-ಚಿರಾಗ್‌, ಮಲೇಷ್ಯಾದ 2 ಬಾರಿ ಒಲಿಂಪಿಕ್‌ ಪದಕ ವಿಜೇತ ಆ್ಯರೊನ್‌ ಚಿಯಾ-ಸೊಹ್‌ ವೂಯ್‌ ಯಿಕ್‌ ವಿರುದ್ಧ 21-12, 21-9ರಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ವರ್ಷಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿಯಾ-ಸೊಹ್‌ ವಿರುದ್ಧ ಸೋತು ಪದಕ ತಪ್ಪಿಸಿಕೊಂಡಿದ್ದಕ್ಕೆ ಭಾರತೀಯ ಜೋಡಿ ಸೇಡು ತೀರಿಸಿಕೊಂಡಿತು.

Scroll to load tweet…

Scroll to load tweet…

ಸಾತ್ವಿಕ್‌-ಚಿರಾಗ್‌ಗೆ ಇದು 2ನೇ ವಿಶ್ವ ಚಾಂಪಿಯನ್‌ಶಿಪ್‌ ಪದಕ. 2022ರಲ್ಲಿ ಈ ಜೋಡಿ ಕಂಚು ಗೆದ್ದಿತ್ತು.

ಬ್ಯಾಡ್ಮಿಂಟನ್‌ ವಿಶ್ವ ಕೂಟ: ಕ್ವಾರ್ಟರಲ್ಲಿ ಸೋತ ಸಿಂಧು

6ನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪದಕ ಗೆಲ್ಲುವ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಕನಸು ಭಗ್ನಗೊಂಡಿದೆ. ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಇಂಡೋನೇಷ್ಯಾದ ಪುತ್ರಿ ಕುಸುಮ ವರ್ದನಿ ವಿರುದ್ಧ 14-21, 21-13, 16-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇನ್ನು, ಮಿಶ್ರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಧೃವ್‌ ಕಪಿಲಾ ಹಾಗೂ ತನಿಶಾ ಕ್ರಾಸ್ಟೋ ಜೋಡಿ ಸಹ ಸೋತು ಹೊರಬಿತ್ತು. ವಿಶ್ವ ನಂ.4 ಜೋಡಿ, ಮಲೇಷ್ಯಾದ ಚೆನ್‌ ಟಾಂಗ್‌ ಹಾಗೂ ತೊ ಇ ವೀ ವಿರುದ್ಧ 15-21, 13-21ರಲ್ಲಿ ಸೋಲುಂಡಿತು.

ಜೋಕೋ, ಆಲ್ಕರಜ್‌, ಸಬಲೆಂಕಾ ಪ್ರಿ ಕ್ವಾರ್ಟರ್‌ಗೆ

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ದಿಗ್ಗಜ ಆಟಗಾರ ನೋವಾಕ್‌ ಜೋಕೋವಿಚ್‌ ಪ್ರಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ.

ಸರ್ಬಿಯಾದ ಮಾಜಿ ವಿಶ್ವ ನಂ1. ಜೋಕೋವಿಚ್‌, ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್‌ ನೋರಿ ವಿರುದ್ಧ 6-4, 6-7(4/7), 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 2ನೇ ಶ್ರೇಯಾಂಕಿತ, ಸ್ಪೇನ್‌ನ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಅವರು 32ನೇ ಶ್ರೇಯಾಂಕಿತ, ಇಟಲಿಯ ಲುಸಿಯಾನೊ ಡಾರ್ಡೆರಿ ವಿರುದ್ಧ 6-2, 6-4, 6-0 ಸೆಟ್‌ಗಳಲ್ಲಿ ಗೆದ್ದು ಅಂತಿಮ 16ರ ಘಟ್ಟ ಪ್ರವೇಶಿಸಿದರು. ಅಮೆರಿಕದ 4ನೇ ಶ್ರೇಯಾಂಕಿತ ಟೇಲರ್‌ ಫ್ರಿಟ್ಜ್‌ ಕೂಡಾ 3ನೇ ಸುತ್ತಿನಲ್ಲಿ ಗೆದ್ದರು.

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ, ಬೆಲಾರಸ್‌ನ ಅರೈನಾ ಸಬಲೆಂಕಾ ಅವರು ಕೆನಡಾದ 31ನೇ ಶ್ರೇಯಾಂಕಿತೆ, ಲೆಯ್ಲಾ ಫೆರ್ನಾಂಡೆಜ್‌ ವಿರುದ್ಧ 6-3, 7-6(7/2) ಸೆಟ್‌ಗಳಲ್ಲಿ ಜಯಗಳಿಸಿದರು.

ಅನಿರುದ್ಧ್-ವಿಜಯ್‌ ಜೋಡಿ ಶುಭಾರಂಭ

ಪುರುಷರ ಡಬಲ್ಸ್‌ನಲ್ಲಿ ಭಾರತದ ಅನಿರುದ್ಧ್‌ ಚಂದ್ರಶೇಕರ್‌ ಹಾಗೂ ವಿಜಯ್‌ ಪ್ರಶಾಂತ್ ಜೋಡಿ ಶುಭಾರಂಭ ಮಾಡಿತು. ಈ ಜೋಡಿ ಮೊದಲ ಸುತ್ತಿನಲ್ಲಿ ಅಮೆರಿಕದ ಕ್ರಿಸ್ಟಿಯನ್‌ ಹ್ಯಾರಿಸನ್‌-ಎವಾನ್‌ ಕಿಂಗ್‌ ವಿರುದ್ಧ 3-6, 6-3, 6-4 ಸೆಟ್‌ಗಳಲ್ಲಿ ಗೆದ್ದಿತು. ಆದರೆ ಶ್ರೀರಾಮ್‌ ಬಾಲಾಜಿ-ರಿಥ್ವಿಕ್‌ ಬೊಲ್ಲಿಪಲ್ಲಿ ಜೋಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿತ್ತು.

ಕಬಡ್ಡಿ: ಯುಪಿ, ಮುಂಬಾಗೆ ಜಯ

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಯುಪಿ ಯೋಧಾಸ್‌, ಯು ಮುಂಬಾ ಶುಭಾರಂಭ ಮಾಡಿವೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 40-35 ಅಂಕಗಳಲ್ಲಿ ಜಯಗಳಿಸಿತು. ಕನ್ನಡಿಗ ಗಗನ್‌ ಗೌಡ 14 ಅಂಕ ಸಂಪಾದಿಸಿ, ಯೋಧಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಸುಮಿತ್‌ ಸಂಗ್ವಾನ್‌ 8, ಗುಮಾನ್‌ ಸಿಂಗ್ 7 ಅಂಕ ಗಳಿಸಿದರು. ಟೈಟಾನ್ಸ್‌ ಪರ ವಿಜಯ್‌ ಮಲಿಕ್‌ ಅಂಕ ಗಳಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ದಿನದ 2ನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಯು ಮುಂಬಾ ಟೈ ಬ್ರೇಕರ್‌ನಲ್ಲಿ ಗೆದ್ದಿತು. ನಿಗದಿತ ಅವಧಿ ಮುಕ್ತಾಯಕ್ಕೆ 2 ತಂಡಗಳು ತಲಾ 29 ಅಂಕ ಗಳಿಸಿದ್ದವು. ಟೈ ಬ್ರೇಕರ್‌ನಲ್ಲಿ 6-5 ಅಂಕಗಳಿಂದ ಮುಂಬಾ ಗೆದ್ದಿತು.

ಇಂದಿನ ಪಂದ್ಯಗಳು

ತಲೈವಾಸ್‌-ಯು ಮುಂಬಾ, ರಾತ್ರಿ 8ಕ್ಕೆ

ಹರ್ಯಾಣ-ಬೆಂಗಾಲ್‌, ರಾತ್ರಿ 9ಕ್ಕೆ