ಭಾರತದಲ್ಲಿ ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸಾಮಾನ್ಯ. ಒಂದು ಪಕ್ಷ ಹಿಂದೂಗಳ ಪರ ನಿಂತ್ರೆ ಇನ್ನೊಂದು ಪಕ್ಷ ಮುಸ್ಲಿಮರ ಪರ ಬ್ಯಾಟ್ ಬೀಸುತ್ತಾರೆ. ರಾಜಕೀಯ ಸುದ್ದಿ ಸ್ಪೋರ್ಟ್ಸ್ ಟೈಂನಲ್ಲಿ ಯಾಕೆ ಹೇಳ್ತಿದ್ದೀವಿ ಅಂದುಕೊಂಡ್ರಾ..? ಅದಕ್ಕೆ ಕಾರಣನೂ ಇದೆ. ಟೀಂ ಇಂಡಿಯಾದಲ್ಲಿ ಕೋಮು ರಾಜಕೀಯ ನಡಿಯುತ್ತಿದೆಯಂತೆ. ತಂಡದಲ್ಲಿ ಮುಸ್ಲಿಮರ ಶೋಷಣೆ ನಡೆಯುತ್ತಿದೆಯಂತೆ.
ಕ್ರಿಕೆಟ್ ಅನ್ನೋ ಮಹಾನ್ ಕ್ರೀಡೆ ಭಾರತಕ್ಕೆ ಕಾಲಿಟ್ಟು ಶತಮಾನವೇ ಕಳೆದು ಹೋಗಿದೆ. ಜಾತಿ,ಧರ್ಮ, ವರ್ಣ ಹೀಗೆ ಯಾವುದರ ಬೇಧವಿಲ್ಲದೆ ಆಡೋ ಕ್ರಿಕೆಟ್ನಲ್ಲಿ ಈಗ ಕೋಮು ರಾಜಕಾರಣ ನುಸುಳಿಬಿಟ್ಟಿದೆ. ದೇಶವನ್ನ ಪ್ರತಿನಿಧಿಸೋ ಟೀಂ ಇಂಡಿಯಾದಲ್ಲಿ ಮೀಸಲಾತಿ ಬೇಕು ಅನ್ನೋ ಮಾತು ಕೇಳಿಬಂದಿದೆ.
ಟ್ವಿಟ್ಟರ್ನಲ್ಲಿ ಸಂಜೀವ್ ಭಟ್ ವಿವಾದಾತ್ಮಕ ಪೋಸ್ಟ್..!
ಟೀಂ ಇಂಡಿಯಾದಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತಿಲ್ಲ, ಭಾರತದ ಮುಸ್ಲಿಮ್ ಕ್ರಿಕೆಟ್ ಆಟಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಉದ್ಧಟತನದ ಹೇಳಿಕೆಯನ್ನು ಗುಜರಾತ್'ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ನೀಡಿದ್ದಾರೆ. ಮೋದಿ ವಿರೋಧಿಯಂದೇ ಬಿಂಬಿತವಾಗಿರೋ ಸಂಜಯ್ ಭಟ್ ಟೀಂ ಇಂಡಿಯಾದಲ್ಲೂ ಬಿಜೆಪಿ ಕೈ ಆಡಿಸುತ್ತಿದೆ ಎಂದು ಇನ್ಡೈರೆಕ್ಟಾಗಿ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಸಂಜೀವ್ ಭಟ್'ರ ಈ ಟ್ವೀಟ್ ನೋಡುತ್ತಿದ್ರೆ ಎಂಥಹ ಕ್ರಿಕೆಟ್ ಪ್ರೇಮಿಗಳಿಗೂ ರೋಷ ಉಕ್ಕಿ ಬರುತ್ತೆ. ಸದ್ಯ ಟೀಂ ಇಂಡಿಯಾದಲ್ಲಿ ಯಾರಾದರೂ ಮುಸ್ಲಿಂ ಆಟಗಾರನಿದ್ದಾನಾ..? ಸ್ವತಂತ್ರ ಬಂದಾಗಿನಿಂದ ಎಷ್ಟು ಬಾರಿ ಮುಸ್ಲಿಂ ಆಟಗಾರರಿಲ್ಲದ ಟೀಂ ಇಂಡಿಯಾ ಅಖಾಡಕ್ಕಿಳಿದಿದೆ. ಮುಸ್ಲಿಂರು ಕ್ರಿಕೆಟ್ ಆಡೋದನ್ನ ನಿಲ್ಲಿಸಿಬಿಟ್ರಾ ಅನ್ನೋ ಟ್ವೀಟ್'ನ್ನು ಪೋಸ್ಟ್ ಮಾಡೋ ಮೂಲಕ ಸಂಜೀವ್ ಭಟ್ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಜೀವ್ ಭಟ್ ಟ್ವೀಟ್'ಗೆ ಟರ್ಬೊನೇಟರ್ ತಕ್ಕ ಉತ್ತರ
ಸಂಜೀವ್ ಭಟ್ ಪ್ರಚೋದನಕಾರಿ ಟ್ವೀಟ್ ದೇಶಾದಾದ್ಯಂತ ಸುದ್ದಿ ಮಾಡಿದೆ. ಇದಕ್ಕೆ ಪರ ಮತ್ತು ವಿರೋಧಗಳ ಮಾತುಗಳು ಕೇಳಿಬಂದ್ವು. ಆದ್ರೆ ಟೀಂ ಇಂಡಿಯಾದ ಟರ್ಬೊನೇಟರ್ ಹರ್ಭಜನ್ ಸಿಂಗ್ ಮಾತ್ರ ಟ್ವಿಟ್ಟರ್ ಮೂಲಕವೇ ಭಟ್ಗೆ ಉತ್ತರ ನೀಡಿದ್ರು.
ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಎಲ್ಲರೂ ಅಣ್ಣ ತಮ್ಮಂದಿರಿದಂತೆ. ಭಾರತ ತಂಡಕ್ಕೆ ಆಡೋ ಪ್ರತಿಯೊಬ್ಬರೂ ಹಿಂದೂಸ್ತಾನಿಯೇ, ಅವರ ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡಬಾರದು ಎಂಬ ಪೋಸ್ಟ್ ಅನ್ನ ಟ್ವಿಟ್ಟರ್ನಲ್ಲಿ ಹಾಕಿ ಸಂಜೀವ್ ಭಟ್'ಗೆ ತಕ್ಕ ಉತ್ತರ ನೀಡಿದ್ರು.
ಏನೇ ಆದ್ರೂ ಸಂಜೀವ್ ಭಟ್ ಟೀಂ ಇಂಡಿಯಾ ಕುರಿತು ಕೊಟ್ಟಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಧರ್ಮದ ಹೆಸರನ್ನ ತಂದಿದ್ದು ಎಷ್ಟು ಸರಿ ಅನ್ನೋದೇ ಪ್ರಶ್ನೆ. ಕ್ರಿಕೆಟ್ ಅನ್ನೋ ಪರಿಶುದ್ಧ ಕ್ರೀಡೆಗೆ ಇಂಥವರ ಕೊಂಕು ಹೇಳಿಕೆಗಳು ತೊಡಕಾಗದೇ ಇರಲಿ.
