ಇದೇ ವೇಳೆ, ಅನಿಲ್ ಕುಂಬ್ಳೆ ರಾಜೀನಾಮೆ ಪ್ರಕರಣವು ಭಾರತ ಕ್ರಿಕೆಟ್ ತಂಡಕ್ಕೆ ಸೌಮ್ಯ ಸ್ವಭಾವದ ಕೋಚ್'ನ ಅಗತ್ಯವಿರುವುದನ್ನು ಸೂಚಿಸುತ್ತದೆ. ಸುನೀಲ್ ಗವಾಸ್ಕರ್, ಮದನ್ ಲಾಲ್ ಮೊದಲಾದ ಮಾಜಿ ಕ್ರಿಕೆಟಿಗರು, ಸಂಜಯ್ ಬಂಗಾರ್ ಅವರನ್ನೇ ಕೋಚ್ ಆಗಿ ನೇಮಿಸುವಂತೆ ಬಿಸಿಸಿಐಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

ನವದೆಹಲಿ(ಜೂನ್ 21): ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ನಾಟಕೀಯ ಪ್ರಸಂಗವು ಭಾರತೀಯ ಕ್ರಿಕೆಟ್'ಗೆ ಕನ್ನಡಿ ಇಡಿದಂತಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮುಂಬರುವ ಟೀಮ್ ಇಂಡಿಯಾ ಕೋಚ್'ನ ಮಾನದಂಡಗಳನೇನಾಗಬಹುದು ಎಂಬುದು ಬಹುತೇಕ ಸ್ಪಷ್ಟವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಅವರನ್ನೇ ಮುಖ್ಯ ಕೋಚ್ ಆಗಿ ಸೀಮಿತ ಅವಧಿಯವರೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಮಾಜಿ ಟೀಮ್ ಇಂಡಿಯಾ ಆಟಗಾರರಾಗಿರುವ ಸಂಜಯ್ ಬಂಗಾರ್ ಸಾಕಷ್ಟು ಕಾಲದಿಂದ ಕೋಚಿಂಗ್ ಕ್ಷೇತ್ರದಲ್ಲಿದ್ದಾರೆ. ಭಾರತ ತಂಡದ ಜೊತೆ ಸಾಕಷ್ಟು ಕಾಲ ಕೆಲಸ ಮಾಡಿದ್ದಾರೆ. ಸದ್ಯ ಬ್ಯಾಟಿಂಗ್ ಕೋಚ್ ಆಗಿರುವ ಇವರು ಎಲ್ಲಾ ಆಟಗಾರರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಎಲ್ಲರೂ ಇವರನ್ನು ಗೌರವಿಸುತ್ತಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕುಂಬ್ಳೆ ಅನುಪಸ್ಥಿತಿಯಲ್ಲಿ ತಂಡದ ಕೋಚ್ ಸ್ಥಾನವನ್ನು ಸಂಜಯ್ ಬಂಗಾರ್ ಅವರೇ ನಿಭಾಯಿಸುತ್ತಿದ್ದಾರೆ. ವಿಂಡೀಸ್ ಪ್ರವಾಸದ ಬಳಿಕ ಬಿಸಿಸಿಐ ಸಂಜಯ್ ಬಂಗಾರ್ ಅವರನ್ನೇ ಮುಖ್ಯ ಕೋಚ್ ಆಗಿ ಬಡ್ತಿ ಕೊಟ್ಟರೂ ಕೊಡುವ ಸಾಧ್ಯತೆ ಇದೆ.

ಇದೇ ವೇಳೆ, ಅನಿಲ್ ಕುಂಬ್ಳೆ ರಾಜೀನಾಮೆ ಪ್ರಕರಣವು ಭಾರತ ಕ್ರಿಕೆಟ್ ತಂಡಕ್ಕೆ ಸೌಮ್ಯ ಸ್ವಭಾವದ ಕೋಚ್'ನ ಅಗತ್ಯವಿರುವುದನ್ನು ಸೂಚಿಸುತ್ತದೆ. ಸುನೀಲ್ ಗವಾಸ್ಕರ್, ಮದನ್ ಲಾಲ್ ಮೊದಲಾದ ಮಾಜಿ ಕ್ರಿಕೆಟಿಗರು, ಸಂಜಯ್ ಬಂಗಾರ್ ಅವರನ್ನೇ ಕೋಚ್ ಆಗಿ ನೇಮಿಸುವಂತೆ ಬಿಸಿಸಿಐಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

ಇತ್ತ, ಬಿಸಿಸಿಐ ನೂತನ ಕೋಚ್ ಆಯ್ಕೆಗೆ ಮತ್ತೊಮ್ಮೆ ಅಭ್ಯರ್ಥಿಗಳ ತಲಾಶ್'ನಲ್ಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ನೂ 7-8 ದಿನಗಳ ಕಾಲಾವಕಾಶ ನೀಡಿದೆ. ಸೂಕ್ತ ಅಭ್ಯರ್ಥಿ ಸಿಗದೇ ಹೋದಲ್ಲಿ ಸಂಜಯ್ ಬಂಗಾರ್ ಅವರನ್ನು ಕೋಚ್ ಆಗಿ ನೇಮಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.