ಸಯೀದ್ ಅಜ್ಮಲ್ ಅನುಮಾನಾಸ್ಪದ ಬೌಲಿಂಗ್ ಬಗ್ಗೆ 2009ರಲ್ಲಿ ಮೊದಲ ಬಾರಿಗೆ ಪ್ರಶ್ನೆಯೆದ್ದಿತ್ತು. ಆ ನಂತರ ಆ ಸಮಸ್ಯೆಯಿಂದ ಹೊರಬಂದರು. ಆ ಬಳಿಕ ಅಜ್ಮಲ್ ಯಶಸ್ವಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ 2009ರಲ್ಲಿ ಮೊದಲ ಟಿ20 ವಿಶ್ವಕಪ್ ಜಯಭೇರಿ ಬಾರಿಸಿತು.
ಕರಾಚಿ(ನ.13): ಪಾಕಿಸ್ತಾನದ ವಿವಾದಾತ್ಮಕ ಕ್ರಿಕೆಟಿಗ ಸಯೀದ್ ಅಜ್ಮಲ್ ಎಲ್ಲಾ ಮಾದರಿಯ ಕ್ರಿಕೆಟ್'ಗೆ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾರೆ. ಪಾಕಿಸ್ತಾನದಲ್ಲಿ ಹಾಲಿ ನಡೆಯುತ್ತಿರುವ ನ್ಯಾಶನಲ್ ಟಿ20 ಟೂರ್ನಮೆಂಟ್ ಅಜ್ಮಲ್ ಪಾಲಿನ ಕೊನೆಯ ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿಯಾಗಿರಲಿದೆ.
"ಈ ನ್ಯಾಶನಲ್ ಟಿ20 ಟೂರ್ನಿ ನನ್ನ ಕೊನೆಯ ಪಂದ್ಯಾವಳಿಯಾಗಲಿದೆ. ನಾನು ಯಾವ ತಂಡದ ಪಾಲಿಗೂ ಹೊರೆಯಾಗಲು ಬಯಸುವುದಿಲ್ಲ. ಇತ್ತೀಚಿನ ಬೆಳವಣಿಗೆಗಳು ನನ್ನನ್ನು ಸಾಕಷ್ಟು ಹತಾಶೆಗೀಡು ಮಾಡಿದೆ. ಯಾರಾದರೂ ನನ್ನ ಆಯ್ಕೆಯ ಬಗ್ಗೆ ಬೆರಳು ತೋರಿಸುವ ಮುನ್ನ ನಾನು ನಿವೃತ್ತಿಯಾಗುತ್ತೇನೆ. ಇದೇ ನನ್ನ ಕೊನೆಯ ನಿರ್ಣಯ'ವೆಂದು ವಿಸ್ಡನ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಯೀದ್ ಅಜ್ಮಲ್ ಅನುಮಾನಾಸ್ಪದ ಬೌಲಿಂಗ್ ಬಗ್ಗೆ 2009ರಲ್ಲಿ ಮೊದಲ ಬಾರಿಗೆ ಪ್ರಶ್ನೆಯೆದ್ದಿತ್ತು. ಆ ನಂತರ ಆ ಸಮಸ್ಯೆಯಿಂದ ಹೊರಬಂದರು. ಆ ಬಳಿಕ ಅಜ್ಮಲ್ ಯಶಸ್ವಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ 2009ರಲ್ಲಿ ಮೊದಲ ಟಿ20 ವಿಶ್ವಕಪ್ ಜಯಭೇರಿ ಬಾರಿಸಿತು.
ಮತ್ತೊಮ್ಮೆ 2014ರಲ್ಲಿ ಅಜ್ಮಲ್ ಸಂಶಯಾಸ್ಪದ ಬೌಲಿಂಗ್ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪ ಕೇಳಿ ಬರುವ ಮುನ್ನ ನವೆಂಬರ್ 2011ರಿಂದ ಡಿಸೆಂಬರ್ 2014ರವರೆಗೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಐಸಿಸಿಯಿಂದ ಬ್ಯಾನ್ ಆದ ಬಳಿಕ ಪಾಕ್ ಸ್ಪಿನ್ ದಿಗ್ಗಜ ಸಕ್ಲೇನ್ ಮುಷ್ತಾಕ್ ಅವರ ಮಾರ್ಗದರ್ಶನದಲ್ಲಿ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಂಡರು, ಆದರೆ ಮೊದಲಿನಂತೆ ಮ್ಯಾಜಿಕ್ ಮಾಡಲು ಸಫಲರಾಗಲಿಲ್ಲ.
2008ರಲ್ಲಿ 30ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಅಜ್ಮಲ್, 35 ಟೆಸ್ಟ್ ಪಂದ್ಯಗಳನ್ನಾಡಿದ್ದು 178 ವಿಕೆಟ್ ಕಬಳಿಸಿದ್ದಾರೆ. ಅಲ್ಲದೇ 113 ಏಕದಿನ ಹಾಗೂ 64 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 184 ಮತ್ತು 85 ವಿಕೆಟ್ ಕಬಳಿಸಿದ್ದಾರೆ.
