ಕೈತಪ್ಪಿದ ಕೋಚ್ ಹುದ್ದೆ: ಆಯ್ಕೆಗಾರನ ಜತೆ ಬಾಂಗರ್ ಜಗಳ!
ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಆಯ್ಕೆ ಸಮಿತಿ ಸದಸ್ಯರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದರು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಸೆ.05]: ವೆಸ್ಟ್‌ಇಂಡೀಸ್ ಪ್ರವಾಸ ಭಾರತ ಕ್ರಿಕೆಟ್ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಪಾಲಿಗೆ ಫಲದಾಯಕವಾಗಿತ್ತು. ಆದರೆ ನಿರ್ಗಮಿತ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಪಾಲಿಗೆ ಈ ಪ್ರವಾಸ ಕಹಿ ನೆನಪುಗಳನ್ನು ಕಟ್ಟಿಕೊಟ್ಟಿತು. ರವಿಶಾಸ್ತ್ರಿ, ಭರತ್ ಅರುಣ್ ಹಾಗೂ ಆರ್.ಶ್ರೀಧರ್ರನ್ನು ಕೋಚ್‌ಗಳನ್ನಾಗಿ ಮುಂದುವರಿಸಲು ನಿರ್ಧರಿಸಿದ ಬಿಸಿಸಿಐ, ಬಾಂಗರ್‌ರನ್ನು ಮಾತ್ರ ವಜಾಗೊಳಿಸಿತು. ಇದರಿಂದ ಸಿಟ್ಟಾದ ಬಾಂಗರ್, 2 ವಾರಗಳ ಹಿಂದೆ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ದೇವಂಗ್ ಗಾಂಧಿ ಜತೆ ಜಗಳವಾಡಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಸಿಗದ ಸಂ‘ಜಯ’: ‘ಬಂಗಾರ’ದ ಹೆಗಲಿಗೆ ಅಪಜಯ?
ಪ್ರಧಾನ ಕೋಚ್ ಆಯ್ಕೆ ಮಾಡಲು ಕ್ರಿಕೆಟ್ ಸಲಹಾ ಸಮಿತಿ ನೇಮಿಸಿದ್ದ ಬಿಸಿಸಿಐ ಆಡಳಿತ ಸಮಿತಿ, ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ಆಯ್ಕೆ ಸಮಿತಿಗೆ ವಹಿಸಿತ್ತು. ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಬಾಂಗರ್, ವಿಂಡೀಸ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನಕ್ಕೆ ಹಾಜರಾಗಿದ್ದರು.
ಬಾಂಗರ್ ಗಲಾಟೆ ಪ್ರಸಂಗದ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ‘ಆಯ್ಕೆ ಸಮಿತಿ ಸಂದರ್ಶನ ನಡೆಸುತ್ತಿದ್ದ ಸಮಯದಲ್ಲಿ, ಬಾಂಗರ್ ವಿಂಡೀಸ್‌ನಲ್ಲಿ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ಇದ್ದ ಆಯ್ಕೆಗಾರ ದೇವಾಂಗ್ ಗಾಂಧಿ ಕೊಠಡಿಗೆ ತೆರಳಿ ಅವರನ್ನು ಮನಬಂದಂತೆ ನಿಂದಿಸಿದರು. ತಂಡ ತಮ್ಮ ಬೆಂಬಲಕ್ಕೆ ನಿಲ್ಲಲಿದೆ. ನನ್ನನ್ನು ವಜಾಗೊಳಿಸುವ ನಿರ್ಧಾರ ಮುಳುವಾಗಲಿದೆ ಎಂದು ಎಚ್ಚರಿಸಿದರು. ಈ ರೀತಿಯ ವರ್ತನೆ ತೋರುವ ಅಗತ್ಯವಿರಲಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.
ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!
ಈ ಪ್ರಸಂಗದ ಕುರಿತು ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಗಮನಕ್ಕೆ ತರಲಾಯಿತು. ಈ ರೀತಿಯ ವರ್ತನೆ ಅವರನ್ನು ಮರು ಆಯ್ಕೆ ಮಾಡದಿರಲು ಕಾರಣಗಳಲ್ಲೊಂದು ಎನ್ನಲಾಗಿದೆ. ‘ಒಂದೊಮ್ಮೆ ಬ್ಯಾಟಿಂಗ್ ಕೋಚ್ ಹುದ್ದೆ ಸಿಗದಿದ್ದರೆ ಎನ್‌ಸಿಎ ಕೋಚ್ ಆಗಿ ನೇಮಕ ಮಾಡುವಂತೆ ಬಾಂಗರ್ ಬೇಡಿಕೆಯಿಟ್ಟರು’ ಎಂದು ಮೂಲಗಳು ತಿಳಿಸಿವೆ.
ದೂರು ನೀಡಿದರಷ್ಟೇ ಕ್ರಮ: ಬಾಂಗರ್ ವಿರುದ್ಧ ತಕ್ಷಣಕ್ಕೆ ಕ್ರಮಕೈಗೊಳ್ಳದ ಬಿಸಿಸಿಐ, ಆಯ್ಕೆಗಾರ ಗಾಂಧಿ, ಪ್ರಧಾನ ಕೋಚ್ ರವಿಶಾಸ್ತ್ರಿ ಹಾಗೂ ತಂಡದ ನಿರ್ಗಮಿತ ವ್ಯವಸ್ಥಾಪಕ ಸುನಿಲ್ ಸುಬ್ರಮಣಿಯಂ ಅಧಿಕೃತವಾಗಿ ದೂರು ನೀಡಿದರಷ್ಟೇ ಪ್ರಕರಣವನ್ನು ಆಡಳಿತ ಸಮಿತಿ ಮುಂದಕ್ಕೆ ಕೊಂಡೊಯ್ಯುವುದಾಗಿ ಸ್ಪಷ್ಟಪಡಿಸಿದೆ.