ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!
ಕೆರಿಬಿಯನ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ಬೀಗುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ಆಘಾತ ನೀಡಿದೆ. ಇನ್ನು ಕಳೆದೊಂದು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿ ಇದೀಗ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಪಾಲಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಷ್ಟಕ್ಕೂ ಏನಿದು ಸ್ಟೋರಿ..? ನೀವೇ ನೋಡಿ...
ದುಬೈ[ಸೆ.03]: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗುತ್ತಿದ್ದ ಟೀಂ ಇಂಡಿಯಾ ವಿರಾಟ್ ಕೊಹ್ಲಿಗೆ ಆಘಾತವೊಂದು ಎದುರಾಗಿದ್ದು, ಮಂಗಳವಾರ ನೂತನವಾಗಿ ಬಿಡುಗಡೆಯಾದ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ಹೌದು, ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಿಸಿದ್ದು, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ. ಕಿಂಗ್ಸ್’ಟನ್ ಟೆಸ್ಟ್’ನ ಎರಡನೇ ಇನಿಂಗ್ಸ್’ನಲ್ಲಿ ಶೂನ್ಯ ಸುತ್ತಿದ್ದು, ಕೊಹ್ಲಿ ಎರಡನೇ ಸ್ಥಾನಕ್ಕೆ ಜಾರುವಂತೆ ಮಾಡಿತು. ಈ ವರ್ಷದ ಕಳೆದ ಮೂರು ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಿಲ್ಲ. ಇದೀಗ ಕೊಹ್ಲಿಗಿಂತ ಒಂದು ರೇಟಿಂಗ್ ಹೆಚ್ಚಿಗೆ ಅಂಕ ಪಡೆಯುವ ಮೂಲಕ ಸ್ಮಿತ್ ನಂ.1 ಸ್ಥಾನಕ್ಕೇರಿದ್ದಾರೆ. ಸ್ಮಿತ್’ಗೆ ನಂ.1 ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನೂ ಅವಕಾಶವಿದ್ದು, ಆ್ಯಷಸ್ ಸರಣಿಯ ಇನ್ನೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಸ್ಮಿತ್ ಅಗ್ರ ಸ್ಥಾನದಲ್ಲೇ ಮುಂದುವರೆಯುವ ಸಾಧ್ಯತೆಯಿದೆ.
ಕೊಹ್ಲಿ-ಸ್ಮಿತ್ ಹೋಲಿಕೆ:
ಚಿತ್ರಕೃಪೆ: ICC
ಸ್ಟ್ರೆಂಥ್ & ಕಂಡೀಷನ್ ಸ್ಟಾಫ್ ಆಯ್ಕೆ; ಕೊಹ್ಲಿ, ಶಾಸ್ತ್ರಿಯಲ್ಲಿ ಭಿನ್ನಮತ!
ಸ್ಟೀವ್ ಸ್ಮಿತ್ ಡಿಸೆಂಬರ್ 2015ರಿಂದಲೂ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ಸ್ಮಿತ್ ಒಂದು ವರ್ಷದವರೆಗೂ ನಿಷೇಧಕ್ಕೆ ಗುರಿಯಾಗಿದ್ದರು. ಆಗಸ್ಟ್ 2018ರ ಬಳಿಕ ಸ್ಮಿತ್ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದರು. ನಿಷೇಧದ ಬಳಿಕ ಆಸೀಸ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ ಸ್ಮಿತ್ ಮೊದಲ ಸರಣಿಯಲ್ಲೇ ಎರಡು ಶತಕ ಸಿಡಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.
ಕೊಹ್ಲಿ ಆಸೀಸ್ ಬ್ಯಾಟ್ಸ್‌ಮನ್ ಸ್ಮಿತ್ ಹಿಂದಿಕ್ಕಲು ಅಕ್ಟೋಬರ್’ವರೆಗೂ ಕಾಯಬೇಕಿದೆ. ಅಕ್ಟೋಬರ್ 02ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿದೆ. ಇನ್ನುಳಿದಂತೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಜಿಂಕ್ಯ ರಹಾನೆ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಹಾನೆ 4 ಸ್ಥಾನ ಏರಿಕೆ ಕಂಡು ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.