ಯುವಿ, ರಾಡಿಕ್ ಅವರನ್ನು ಬೆಂಬಲಿಸುತ್ತಾ, ಭವಿಷ್ಯದಲ್ಲಿ ಈತನೇ ಟೆನಿಸ್ ಲೋಕದ ದೊರೆ ಎಂದು ಹೇಳಿದ್ದರು.
ಲಂಡನ್(ಜು.18): ಭಾನುವಾರ 8ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದು ದಾಖಲೆ ಬರೆದ ರೋಜರ್ ಫೆಡರರ್‌ರನ್ನು ಬೆಂಬಲಿಸಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಲಂಡನ್‌ಗೆ ತೆರಳಿದ್ದರು. ಫೆಡರರ್ ಗೆದ್ದ ಬಳಿಕ ‘ದಿ ಟೆಲಿಗ್ರಾಫ್’ ಪತ್ರಿಯೊಂದಿಗೆ ಸಂಭ್ರಮ ಹಂಚಿಕೊಂಡಿರುವ ಸಚಿನ್, 2002ರಲ್ಲೇ ತಾವು ಫೆಡರರ್ ಟೆನಿಸ್ ಲೋಕವನ್ನು ಆಳುವುದಾಗಿ ಭವಿಷ್ಯ ನುಡಿದಿದ್ದಾಗಿ ಹೇಳಿದ್ದಾರೆ.
‘2002ರಲ್ಲಿ ನಾನು ಹಾಗೂ ಯುವರಾಜ್ ಸಿಂಗ್ ಒಟ್ಟಿಗೆ ಫೆಡರರ್ ಹಾಗೂ ಆ್ಯಂಡಿ ರಾಡಿಕ್ ನಡುವಿನ ಪಂದ್ಯ ವೀಕ್ಷಿಸುತ್ತಿದ್ದೆವು. ಯುವಿ, ರಾಡಿಕ್ ಅವರನ್ನು ಬೆಂಬಲಿಸುತ್ತಾ, ಭವಿಷ್ಯದಲ್ಲಿ ಈತನೇ ಟೆನಿಸ್ ಲೋಕದ ದೊರೆ ಎಂದು ಹೇಳಿದ್ದರು. ನಮ್ಮಿಬ್ಬರ ನಡುವೆ ಭಾರೀ ಚರ್ಚೆಯಾಗಿತ್ತು. ನಾನಾಗ, ಮುಂದಿನ 8-10 ವರ್ಷಗಳಲ್ಲಿ ಫಲಿತಾಂಶ ತಿಳಿಯಲಿದೆ. ಫೆಡರರ್ ಎಲ್ಲರನ್ನೂ ಮೀರಿಸಲಿದ್ದಾರೆ ಎಂದಿದ್ದೆ. ಆನಂತರ ಮತ್ತೊಮ್ಮೆ ಯುವರಾಜ್ ಈ ಬಗ್ಗೆ ಚರ್ಚಿಸಲು ಫೆಡರರ್ ಅವಕಾಶ ನೀಡಲೇ ಇಲ್ಲ’ ಎಂದು ಹೇಳಿದ್ದಾರೆ.

