ಮುಂಬೈ, [ಜ.02]: ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರ ಬಾಲ್ಯದ ಕ್ರಿಕೆಟ್ ಕೋಚ್​ ರಮಾಕಾಂತ್​ ಅಚ್ರೇಕರ್​ ಇಂದು [ಬುಧವಾರ] ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 86 ವರ್ಷ ವಯಸ್ಸಿನ ರಮಾಕಾಂತ್​ ಅವರು ಇಂದು ಮುಂಬೈನ ದಾದರ್ ನಲ್ಲಿರುವ ಶಿವಾಜಿ ಪಾರ್ಕ್ ನಿವಾಸದಲ್ಲಿ ಕೊನೆಯುಸಿರೆಳೆದರು.

ಸಚಿನ್​ ತೆಂಡೂಲ್ಕರ್​ ಬಾಲ್ಯದ ಕೋಚ್ ಆಗಿದ್ದ ರಮಾಕಾಂತ್, ಕ್ರಿಕೆಟ್​ ಜೀವನದಲ್ಲಿ ​ಮಹತ್ವದ ಪಾತ್ರವಹಿಸಿದ್ದು, ಬಾಲ್ಯದಲ್ಲಿ ರಮಾಕಾಂತ್​ ಸಚಿನ್​ಗೆ ಕ್ರಿಕೆಟ್​ ಪಟ್ಟುಗಳನ್ನ ಕರಗತ ಮಾಡಿದ್ದರು. 

ರಮಾಕಾಂತ್​ ಗರಡಿಯಲ್ಲಿ ಪಳಗಿದ ಸಚಿನ್, ವಿಶ್ವ ಶ್ರೇಷ್ಠ ಬ್ಯಾಟ್ಸ್​​​ಮನ್ ಆಗಿ ಕ್ರಿಕೆಟ್​ ದುನಿಯಾದಲ್ಲಿ ಉತ್ತುಂಗಕ್ಕೇರಿದ್ದರು. ಕ್ರಿಕೆಟ್ ಲೋಕದಲ್ಲಿ ಸಚಿನ್ ಎಷ್ಟೇ ಮೇಲೇರಿದ್ದರು​ ತಮ್ಮ ಗುರುಗಳ ಮೇಲೆ ಅಪಾರ ಗೌರವ, ಪ್ರೀತಿ ಹೊಂದಿದ್ದರು. 

ಎಷ್ಟರ ಮಟ್ಟಿಗೆ ಗೌರವ ಇತ್ತು ಅಂದ್ರೆ ಪ್ರತಿ ವರ್ಷ ಗುರು ಪೂರ್ಣಿಮಾ ದಿನ ಖುದ್ದು ರಮಾಕಾಂತ್ ಬಳಿ ತೆರಳಿ ಅವರ ಆಶೀರ್ವಾದ ಪಡೆಯುತ್ತಿದ್ದರು. ಸಚಿನ್ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಕೂಡ ರಮಾಕಾಂತ್ ಶಿಷ್ಯ ಕೂಡ ಆಗಿದ್ದಾರೆ.