ನವದೆಹಲಿ[ಮಾ.16]: ವೇಗಿ ಶ್ರೀಶಾಂತ್‌ ಮೇಲೆ ಬಿಸಿಸಿಐ ಶಿಸ್ತು ಸಮಿತಿ ಹೇರಿದ್ದ ಆಜೀವ ನಿಷೇಧ ರದ್ದುಗೊಳಿಸಿರುವ ಸುಪ್ರೀಂಕೋರ್ಟ್‌ ತೀರ್ಪು ಹಾಗೂ 3 ತಿಂಗಳೊಳಗೆ ಶ್ರೀಶಾಂತ್‌ಗೆ ವಿಧಿಸಿರುವ ಶಿಕ್ಷೆಯ ಮರುಪರಿಶೀಲನೆ ಮಾಡಬೇಕೆಂಬ ಆದೇಶದ ಕುರಿತು ಮುಂದಿನ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ನೇಮಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದ್ದಾರೆ.

ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!

ಈ ಕುರಿತು ಪ್ರತಿಕ್ರಿಯಿಸಿರುವ ರಾಯ್‌, ‘ಶ್ರೀಶಾಂತ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಕುರಿತು ಮಾಹಿತಿ ಪಡೆದಿದ್ದೇನೆ. ಆದರೆ, ಸುಪ್ರೀಂನ ಆದೇಶದ ಪ್ರತಿಯನ್ನು ಪಡೆಯಬೇಕಿದೆ. ಸಿಒಎ ಸಭೆಯಲ್ಲಿ ಖಂಡಿತವಾಗಿಯೂ ಈ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದಿದ್ದಾರೆ.

ಉದ್ದೀಪನಾ ನಿಷೇಧ ಕಾಯ್ದೆ ಕುರಿತು ಐಸಿಸಿ ಅಧಿಕಾರಿಗಳೊಂದಿಗೆ ಸಿಒಎ ಮಾ.18ರಂದು ಸಭೆ ಆಯೋಜಿಸಿದೆ. ಇದೇ ದಿನ ಸಿಒಎ, ಶ್ರೀಶಾಂತ್‌ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ. ಆಂಬುಡ್ಸ್‌ಮನ್‌ ಆಗಿ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್‌ ಹಾಗೂ ನ್ಯಾಯಾಲಯದ ಮಧ್ಯಸ್ಥಿಕೆಗಾರರಾಗಿ ಹಿರಿಯ ನ್ಯಾಯವಾದಿ ಪಿ.ಎಸ್‌. ನರಸಿಂಹ ಅವರನ್ನು ಬಿಸಿಸಿಐ ಒಳಗೊಂಡಿದ್ದು, ಪ್ರಕರಣ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

‘ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಸಿಎಒ ಮೇಲಿದ್ದು, ಶ್ರೀಶಾಂತ್‌ ವಿಚಾರದಲ್ಲೂ ಸಿಒಎ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ಸಿಒಎನ ಮುಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುವುದು’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.