ಟೇಲರ್ ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದ ನ್ಯೂಜಿಲೆಂಡ್‌ನ 4ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಕ್ರೈಸ್ಟ್ಚರ್ಚ್(ಫೆ.22): ಇನಿಂಗ್ಸ್'ನ ಕೊನೆಯ ಎಸೆತದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ನ್ಯೂಜಿಲೆಂಡ್ ತಂಡದ ರಾಸ್ ಟೇಲರ್, ದಕ್ಷಿಣ ಆಫ್ರಿಕಾ ತಂಡದ ಸತತ 12ನೇ ಏಕದಿನ ಪಂದ್ಯದ ಗೆಲುವನ್ನು ಕಸಿದರು. ನ್ಯೂಜಿಲೆಂಡ್ ತಂಡ, 2ನೇ ಏಕದಿನ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ 6ರನ್'ಗಳ ಗೆಲುವು ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಇಲ್ಲಿನ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲೆಂಡ್ 50 ಓವರ್ಗಳಲ್ಲಿ 4 ವಿಕೆಟ್'ಗೆ 289ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ 50 ಓವರ್ಗಳಲ್ಲಿ 9 ವಿಕೆಟ್'ಗೆ 283ರನ್'ಗಳಿಸಲಷ್ಟೇ ಶಕ್ತವಾಯಿತು.
ಸವಾಲಿನ ಮೊತ್ತ ಬೆನ್ನಟ್ಟಿದ ದ.ಆಫ್ರಿಕಾ ತಂಡ ಇನಿಂಗ್ಸ್'ನ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಡಿಕಾಕ್ (57), ಮಧ್ಯಮ ಕ್ರಮಾಂಕದಲ್ಲಿ ಜೆ.ಪಿ. ಡುಮಿನಿ (34), ನಾಯಕ ಡಿವಿಲಿಯರ್ಸ್ (45)ಮತ್ತು ಡ್ವೇನ್ ಪ್ರೆಟೋರಿಯಸ್ (50)ರನ್'ಗಳಿಸಿ ತಂಡಕ್ಕೆ ಆಸರೆಯಾದರೆ, ಇನ್ನುಳಿದ ಬ್ಯಾಟ್ಸ್ಮನ್ಗಳು ನೀರಸ ಪ್ರದರ್ಶನ ತೋರಿದರು. ಕೊನೆಯಲ್ಲಿ ಪ್ರೆಟೋರಿಯಸ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗಮನಸೆಳೆದರು. ಕಿವೀಸ್ ಪರ ಬೋಲ್ಟ್ 3, ಸ್ಯಾಂಟ್ನರ್ ೨ ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಆರಂಭಿಕ ಡೀನ್ ಬ್ರೌನಿ (34) ನಾಯಕ ಕೇನ್ ವಿಲಿಯಮ್ಸನ್ (69), ರಾಸ್ ಟೇಲರ್ ಅಜೇಯ (102) ಮತ್ತು ಜಿಮ್ಮಿ ನಿಶಾಮ್ ಅಜೇಯ (71)ರನ್'ಗಳಿಸಿದರು.
ಟೇಲರ್ ದಾಖಲೆ
ಟೇಲರ್ ಇನಿಂಗ್ಸ್ನ ಕೊನೆ ಎಸೆತದಲ್ಲಿ ಬೌಂಡರಿಗಳಿಸಿ ಶತಕ ಪೂರೈಸಿದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ 17ನೇ ಶತಕ ಪೂರ್ಣಗೊಳಿಸುವುದರೊಂದಿಗೆ ನ್ಯೂಜಿಲೆಂಡ್ನ ಮಾಜಿ ಆಟಗಾರ ನಥಾನ್ ಆಸ್ಟಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಗೆ ಟೇಲರ್ ಈ ಶತಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 6 ಸಾವಿರ ರನ್ ಪೂರೈಸಿದ ನ್ಯೂಜಿಲೆಂಡ್ನ 4ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 50 ಓವರ್ಗಳಲ್ಲಿ 4 ವಿಕೆಟ್ಗೆ 289
(ರಾಸ್ ಟೇಲರ್ ಅಜೇಯ 102, ನಿಶಾಮ್ ಅಜೇಯ 71, ಪ್ರೆಟೋರಿಯಸ್ 40ಕ್ಕೆ 2)
ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 9 ವಿಕೆಟ್ಗೆ 283
(ಡಿಕಾಕ್ 57, ಪ್ರೆಟೋರಿಯಸ್ 50, ಬೋಲ್ಟ್ 63ಕ್ಕೆ 3)
