Asianet Suvarna News Asianet Suvarna News

ಪ್ರಿ ಕ್ವಾರ್ಟರ್‌ಗೇರಿದ ಬೋಪಣ್ಣ: 'ಭಾರತದ ಸೂಪರ್ ಸ್ಟಾರ್' ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ ವಿಂಬಲ್ಡನ್‌..!

ವಿಂಬಲ್ಡನ್ ಗ್ರ್ಯಾನ್‌ ಸ್ಲಾಂನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ
ರೋಹನ್ ಬೋಪಣ್ಣ ಭಾರತದ ಸೂಪರ್ ಸ್ಟಾರ್ ಎಂದು ಬಣ್ಣಿಸಿದ ವಿಂಬಲ್ಡನ್‌
ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ನೋವಾಕ್ ಜೋಕೋವಿಚ್

Rohan Bopanna pair enters pre quarter final Wimbledon Kannada tweet goes viral kvn
Author
First Published Jul 11, 2023, 9:45 AM IST

ಲಂಡನ್‌(ಜು.11): ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಇದರ ಬೆನ್ನಲ್ಲೇ ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು ಭಾರತದ ಸೂಪರ್ ಸ್ಟಾರ್ ಎಂದು ಟ್ವೀಟ್ ಮಾಡುವ ಮೂಲಕ ಗೌರವ ಸೂಚಿಸಿದೆ. ಇದು ಕನ್ನಡ ಟೆನಿಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ವಿಂಬಲ್ಡನ್ ಅವರ ಕನ್ನಡ ಟ್ವೀಟ್‌ ಅನ್ನು ಸ್ವತಃ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಹನ್ ಬೋಪಣ್ಣ, ಕನ್ನಡದಲ್ಲೇ ಧನ್ಯವಾದ ಎಂದು ರೀಟ್ವೀಟ್‌ ಮಾಡಿದ್ದಾರೆ. ಈ ಮೂಲಕ ರೋಹನ್ ಬೋಪಣ್ಣ ಕೂಡಾ ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ. 

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆ ಕಣಕ್ಕಿಳಿದಿರುವ ಅವರು, ಸೋಮವಾರ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೇಕಬ್‌-ಜೊಹನ್ನಸ್‌ ಮಂಡೇ ವಿರುದ್ಧ 7-5. 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಇಂಡೋ-ಆಸೀಸ್‌ ಜೋಡಿಗೆ ನೆದರ್‌ಲೆಂಡ್ಸ್‌ನ ಡೇವಿಡ್‌ ಪೆಲ್‌-ಅಮೆರಿಕದ ರೀಸ್‌ ಸ್ಟಾಲ್ಡರ್‌ ಸವಾಲು ಎದುರಾಗಲಿದೆ.

ಜೋಕೋವಿಚ್‌, ಇಗಾ ಸ್ವಿಯಾಟೆಕ್ ಕ್ವಾರ್ಟರ್‌ ಪ್ರವೇಶ

ಸತತ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಚೊಚ್ಚಲ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ತವಕದಲ್ಲಿರುವ ಇಗಾ ಸ್ವಿಯಾಟೆಕ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮಳೆಯಿಂದಾಗಿ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಿಕೆಯಾಗಿದ್ದ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಜೋಕೋ, ಪೋಲೆಂಡ್‌ನ ಹ್ಯುಬರ್ಟ್‌ ಹರ್ಕಜ್‌ ವಿರುದ್ಧ 7-6(8/6), 7-6(8/6), 5-7, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇದು ಜೋಕೋಗೆ ವಿಂಬಲ್ಡನ್‌ನಲ್ಲಿ ಸತತ 32ನೇ ಗೆಲುವು. ಕ್ವಾರ್ಟರ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ 3ನೇ ಶ್ರೇಯಾಂಕಿತ, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಚೆಕ್‌ ಗಣರಾಜ್ಯದ ಜಿರಿ ಲೆಹೆಕ್ಕಾ ವಿರುದ್ಧ ವಾಕ್‌ಓವರ್‌ ಪಡೆದು ಕ್ವಾರ್ಟರ್‌ಗೇರಿದರು. ಆದರೆ ಗ್ರೀಕ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಅಮೆರಿಕದ, ಶ್ರೇಯಾಂಕ ರಹಿತ ಕ್ರಿಸ್ಟೋಫರ್ ಯುಬಂಕ್ಸ್‌ ವಿರುದ್ಧ ಸೋಲಿನ ಆಘಾತ ಅನುಭವಿಸಿದರು.

ಚೀನಾದ ಲೀ ಶಿ ಫಂಗ್ ಮಣಿಸಿ ಕೆನಡಾ ಓಪನ್ ಕಿರೀಟ ಗೆದ್ದ ಲಕ್ಷ್ಯ ಸೆನ್

ಇಗಾ ಜಯಭೇರಿ: ಇದಕ್ಕೂ ಮೊದಲು ಭಾನುವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.1, ಪೋಲೆಂಡ್‌ ಇಗಾ ಸ್ವಿಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಕ್‌ ವಿರುದ್ಧ 6-7(4/7), 7-6(7/2), 6-3 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 5ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಇಗಾಗೆ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಸವಾಲು ಎದುರಾಗಲಿದೆ. ಇನ್ನು, ಹಾಲಿ ಚಾಂಪಿಯನ್‌, ಕಜಕಸ್ತಾನದ ಎಲೆನಾ ರಬೈಕೆನಾ ಬ್ರೆಜಿಲ್‌ನ ಹದ್ದಾದ್‌ ಮಿಯಾ ವಿರುದ್ಧದ ಪಂದ್ಯದಲ್ಲಿ ವಾಕ್‌ಓವರ್‌ ಪಡೆದು ಕ್ವಾರ್ಟರ್‌ ಪ್ರವೇಶಿಸಿದರು. ವಿಶ್ವ ನಂ.2 ಬೆಲಾರಸ್‌ನ ಸಬಲೆಂಕಾ ಕೂಡಾ ಕ್ವಾರ್ಟರ್‌ಗೇರಿದರು. ಆದರೆ ರಷ್ಯಾದ 16 ವರ್ಷದ ಮಿರ್ರಾ ಆ್ಯಂಡ್ರೀವಾ ಪ್ರಿ ಕ್ವಾರ್ಟರ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.

Follow Us:
Download App:
  • android
  • ios