ಚನ್ನಪಟ್ಟಣದಲ್ಲಿ ಕಣ್ಣೀರಿಟ್ಟ ಪುತ್ರ ನಿಖಿಲ್, ಕಟುಕರಿಗೆ ಕಣ್ಣೀರು ಬರಲ್ಲ ಎಂದ ತಂದೆ ಕುಮಾರಸ್ವಾಮಿ!
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಂಡ್ಯ ಸೋಲಿನ ನೆನಪು ಮಾಡಿಕೊಂಡು ಭಾವುಕರಾದ ನಿಖಿಲ್, ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಕೂಡ ಆರಂಭವಾಗಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿ ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾರ್ಧಯಕ್ಷ ನಿಖಿಲ್ ಕುಮಾರಸ್ವಾಮಿ ಕಣ್ಣಾಲಿಗಳಿಂದ ನೀರು ಜಾರಿದೆ. ಆದರೆ ಅದು ಚುನಾವಣಾ ರಣರಂಗ. ಹೀಗಾಗಿ ಕಣ್ಣೀರು ಕೂಡ ಕಿಚ್ಚಾಗಿ ಬದಲಾಗಿದೆ. ಭಾಷ್ಪಯುದ್ಧಕ್ಕೆ ನಿಖಿಲ್ ಮುನ್ನುಡಿ ಬರೆದರೆ, ಅದನ ಕೈ ಕಲಿಗಳು ಮುಂದುವರೆಸಿಕೊಂಡು ಹೋಗಿದ್ದಾರೆ. ಈ ಕಣ್ಣೀರಿಗೆ ಯಾರು ಹೊಣೆ ಅನ್ನೋ ಚರ್ಚೆ ಶುರುವಾಗಿದೆ. ಮಗನ ಕಣ್ಣೀರಿಗೆ ಅಪ್ಪ-ಅಮ್ಮನೇ ಕಾರಣ ಅನ್ನೋ ಆಪಾದನೆ ಬಂದಿದೆ. ಕಣ್ಣೀರ ಕದನದಲ್ಲಿ ಕೈ ನಾಯಕರೇ ಕಟುಕರು ಎಂದು ಹೆಚ್.ಡಿ. ಕುಮಾರಸ್ವಾಮಿ ಹೂಃಂಕರಿಸಿದ್ದಾರೆ. ಒಟ್ಟಾರೆ, ಬೊಂಬೆನಾಡು ಚನ್ನಪಟ್ಟಣದಲ್ಲಿ ರಾಜಕೀಯ ಷಡ್ಯಂತ್ರದ ಜ್ವಾಲೆಯೂ ಧಗ ಧಗ ಉರಿಯುತ್ತಿದೆ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಣ್ಣೀರ ಕಿಚ್ಚು..
ಚನ್ನಪಟ್ಟಣದ ಸಂಗ್ರಾಮದ ಷಡ್ಯಂತ್ರದ ಸ್ಟೋರಿ ಇಲ್ಲಿಗೆ ಮುಗಿದಿಲ್ಲ. ಇದನ್ನ ಶುರು ಮಾಡಿದ್ದ ನಿಖಿಲ್ ಕುಮಾರಸ್ವಾಮಿಯೇ.., ಮತ್ತೆ ಮುಂದುವರೆಸಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋತು, ಚನ್ನಪಟ್ಟಣದಲ್ಲಿ ಹೊಸ ಕದನ ಆರಂಭಿಸಿದ್ದಾರೆ. ಆದರೆ, ಹೊಸ ಕದನದಲ್ಲಿ ಹಳೆಯ ಅಸ್ತ್ರವನ್ನು ಬಳಸಿದ್ದಾರೆ. ಚನ್ನಪಟ್ಣಣ ಚುನಾವಣೆಯಲ್ಲಿ ಮಂಡ್ಯ ಸೋಲನ್ನ ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಚನ್ನಪಟ್ಟಣದ ಜನತೆಯ ಮುಂದೆ ಸಕ್ಕರೆ ನಾಡಿನ ಸಂಗ್ರಾಮದ ಕಥೆ ಹೇಳಿ ತಮ್ಮ ಸೋಲಿಗೆ ನಡೆಸಿದ ಷಡ್ಯಂತ್ರದ ಬಗ್ಗೆ ಆರೋಪ ಮಾಡಿದ್ದಾರೆ.
ಚುನಾವಣೆ ಬಂದಾಗ ಜೋರು ಸದ್ದು ಮಾಡೋ ವಿಚಾರ ಅಂದ್ರೆ, ಅದು ಪಕ್ಷಾಂತರ. ಈಗ ಚನ್ನಪಟ್ಣಣ ಚುನಾವಣಾ ಅಖಾಡದಲ್ಲಿಯೂ ಪಕ್ಷಾಂತರ ಪರ್ವ ಆರಂಭವಾಗಿದೆ. ಇತ್ತಿಂದ ಅತ್ತ… ಅತ್ತಿಂದ ಇತ್ತ ಲೋಕಲ್ ನಾಯಕರು ಜಿಗಿತಾ ಇದ್ದಾರೆ. ಹಾಗಾದರೆ, ಆಪರೇಷನ್ ಚನ್ನಪಟ್ಟಣ ಹೇಗೆ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..