ಚೀನಾದ ಲೀ ಶಿ ಫಂಗ್ ಮಣಿಸಿ ಕೆನಡಾ ಓಪನ್ ಕಿರೀಟ ಗೆದ್ದ ಲಕ್ಷ್ಯ ಸೆನ್
ಕೆನಡಾ ಓಪನ್ ಪ್ರಶಸ್ತಿ ಗೆದ್ದು ಪದಕದ ಬರ ನೀಗಿಸಿಕೊಂಡ ಲಕ್ಷ್ಯ ಸೆನ್
ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯ ಚಾಂಪಿಯನ್
21ರ ಸೇನ್, ತಮ್ಮ ವೃತ್ತಿ ಜೀವನದ 2ನೇ ಸೂಪರ್ 500 ಟೂರ್ನಿ ಗೆಲುವು
ಕ್ಯಾಲ್ಗರಿ(ಜು.11): ದೀರ್ಘ ಸಮಯದಿಂದ ಪದಕ ಬರ ಎದುರಿಸುತ್ತಿದ್ದ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಕೊನೆಗೂ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ತಡರಾತ್ರಿ ನಡೆದ ರೋಚಕ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್, ಚೀನಾದ ಲೀ ಶಿ ಫೆಂಗ್ ಅವರನ್ನು 21-18, 22-20 ಅಂತರದಲ್ಲಿ ಸೋಲಿಸಿದ 21ರ ಸೇನ್, ತಮ್ಮ ವೃತ್ತಿ ಜೀವನದ 2ನೇ ಸೂಪರ್ 500 ಟೂರ್ನಿ ಗೆದ್ದರು. ಈ ಮೊದಲು 2022ರಲ್ಲಿ ಇಂಡಿಯಾ ಓಪನ್ ಟೂರ್ನಿಯಲ್ಲಿ ಸೇನ್ ಚಾಂಪಿಯನ್ ಆಗಿದ್ದರು.
ಪಂದ್ಯದ ಆರಂಭದಲ್ಲೇ ಸೇನ್ ಮೇಲಗೈ ಸಾಧಿಸಿದ್ದರೂ ಬಳಿಕ ಪುಟಿದೆದ್ದ ಫೆಂಗ್, ಸೇನ್ ತೀವ್ರ ಪೈಪೋಟಿ ನೀಡಿದರು. ಆದರೆ ತಮ್ಮ ಆಕರ್ಷಕ ಹೊಡೆತಗಳ ಮೂಲಕ ಸೇನ್ ಎದುರಾಳಿಯನ್ನು ಕಟ್ಟಿಹಾಕಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದು ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಗೆದ್ದ ಬಳಿಕ ಸೇನ್‌ಗೆ ಸಿಕ್ಕ 2ನೇ ಪ್ರಶಸ್ತಿ. ಅಲ್ಲದೇ, ಈ ವರ್ಷ ಭಾರತಕ್ಕೆ ಪುರುಷರ ಸಿಂಗಲ್ಸ್‌ನಲ್ಲಿ ದೊರೆತ 2ನೇ ಪ್ರಶಸ್ತಿ ಎನಿಸಿಕೊಂಡಿತು. ಇತ್ತೀಚೆಗಷ್ಟೇ ಎಚ್.ಎಸ್.ಪ್ರಣಯ್ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.
4ನೇ ಪ್ರಶಸ್ತಿ ಗೆದ್ದ ಭಾರತ
ಕೆನಡಾ ಓಪನ್‌ನಲ್ಲಿ ಭಾರತಕ್ಕಿದು ಒಟ್ಟಾರೆ 4ನೇ ಪ್ರಶಸ್ತಿ. 2015 ಮಹಿಳಾ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಮೊದಲ ಬಾರಿ ಚಾಂಪಿಯನ್ ಆಗಿದ್ದರು. ಬಳಿಕ 2016ರಲ್ಲಿ ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರೆ, ಪುರುಷರ ಡಬಲ್ಸ್‌ನಲ್ಲಿ ಮನು-ಸುಮೀತ್ ರೆಡ್ಡಿ ಚಾಂಪಿಯನ್ ಎನಿಸಿಕೊಂಡಿದ್ದರು. ಮಹಿಳಾ ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಈವರೆಗೆ ಭಾರತಕ್ಕೆ ಪ್ರಶಸ್ತಿ ಲಭಿಸಿಲ್ಲ.
ಇಂದಿನಿಂದ ಯುಎಸ್ ಓಪನ್ ಬ್ಯಾಡ್ಮಿಂಟನ್
ಲೋವಾ(ಅಮೆರಿಕ): ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭಗೊಳ್ಳಲಿದ್ದು, ಭಾನುವಾರವಷ್ಟೇ ಕೆನಡಾ ಓಪನ್ ಪ್ರಶಸ್ತಿ ಗೆದ್ದ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಜೊತೆ ಪಿ.ವಿ.ಸಿಂಧು ಕೂಡಾ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.ಸೇನ್ ಜೊತೆ ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಕೂಡಾ ಕಣಕ್ಕಿಳಿಯಲ್ಲಿದ್ದಾರೆ.
ಬ್ಯಾಂಗಳೂರ್ ಅಲ್ಲ ಬೆಂಗಳೂರು: ಕನ್ನಡಿಗರಿಗೆ ಕೊಹ್ಲಿ ಅಂದ್ರೆ ಇದಕ್ಕೇ ಪಂಚಪ್ರಾಣ
ಮಹಿಳಾ ಸಿಂಗಲ್ಸ್‌ನಲ್ಲಿ ರುತ್ವಿಕಾ ಶಿವಾನಿ ಆಡಲಿದ್ದು, ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಹಾಗೂ ವಿಷ್ಣುವರ್ಧನ್ ಸ್ಪರ್ಧಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಪೇಕ್ಷಾ ನಾಯಕ್-ರಮ್ಯಾ, ರುತುಪರ್ಣಾ-ಶ್ವೇತಪರ್ಣ ಜೋಡಿ ಕಣಕ್ಕಿಳಿಯಲಿದ್ದು, ಪದಕ ನಿರೀಕ್ಷೆಯಲ್ಲಿದ್ದಾರೆ.
ವಿಶ್ವ ಕಿರಿಯರ ಆರ್ಚರಿ: ಪಾರ್ಥ್‌ಗೆ ರೀಕರ್ವ್ ಚಿನ್ನ
ಲೀಮರಿಕ್(ಐರ್ಲೆಂಡ್): ಭಾರತದ ತಾರಾ ಆರ್ಚರಿ ಪಟು ಪಾರ್ಥ್ ಸಾಲುಂಕೆ ಆರ್ಚರಿ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನ ರೀಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 19 ವರ್ಷದ ಪಾರ್ಥ್ ಅಂಡರ್-21 ಪುರುಷರ ವಿಭಾಗದ ರೀಕರ್ವ್ ಫೈನಲ್‌ನಲ್ಲಿ ಕೊರಿಯಾದ ಸಾಂಗ್ ಇಂಜುನ್ ವಿರುದ್ಧ ಗೆಲುವು ಸಾಧಿಸಿದರು. ಅಲ್ಲದೇ, ಮಹಿಳೆಯರ ಅಂಡರ್-21 ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ಭಾಜ ಕೌರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಭಾರತ ಒಟ್ಟು 11 ಪದಕಗಳೊಂದಿಗೆ ಕೂಟದಲ್ಲಿ ಅಭಿಯಾನ ಕೊನೆಗೊಳಿಸಿತು. ಭಾರತ 6 ಚಿನ್ನ, 1 ಬೆಳ್ಳಿ ಹಾಗೂ 4 ಕಂಚು ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಕೊರಿಯಾ ಬಳಿಕ 2ನೇ ಸ್ಥಾನ ಪಡೆಯಿತು.