ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, ಕ್ರೊವೇಷಿಯಾದ ಮರಿನ್ ಸಿಲಿಚ್ ವಿರುದ್ಧ 20ನೇ ಗ್ರ್ಯಾಂಡ್‌'ಸ್ಲಾಂ ಕಿರೀಟಕ್ಕಾಗಿ ಸೆಣಸಾಡಲಿದ್ದಾರೆ.

ಮೆಲ್ಬರ್ನ್(ಜ.26): ಹಾಲಿ ಚಾಂಪಿಯನ್ ರೋಜರ್ ಫೆಡರರ್, 7ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೋರಿಯಾದ 21 ವರ್ಷದ ಹ್ಯುನ್ ಚುಂಗ್ ಪಂದ್ಯದ ಮಧ್ಯದಲ್ಲಿ ಗಾಯಗೊಂಡ ಹಿನ್ನಲೆಯಲ್ಲಿ ಮೊದಲೆರಡು ಸೆಟ್'ಗಳಲ್ಲಿ ಮುನ್ನೆಡೆ ಸಾಧಿಸಿದ್ದ ರೋಜರ್ ಫೆಡರರ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ರೋಜರ್ ಫೆಡರರ್ ಮೊದಲ ಸೆಟ್' 6-1ರ ಅಂತರದಲ್ಲಿ ಗೆದ್ದಿದ್ದರು. ಇನ್ನು 2ನೇ ಸೆಟ್‌'ನಲ್ಲಿ ಸ್ವಿಸ್ ಟೆನಿಸಿಗ 5-2ರ ಮುನ್ನಡೆ ಸಾಧಿಸಿದ್ದರು. ಈ ವೇಳೆ ಗಾಯಗೊಂಡ ಹ್ಯುನ್ ಚುಂಗ್ ಪಂದ್ಯದಿಂದ ಹಿಂದೆ ಸರಿದರು. ಈ ಗೆಲುವಿನೊಂದಿಗೆ 30ನೇ ಬಾರಿಗೆ ಗ್ರ್ಯಾಂಡ್‌'ಸ್ಲಾಂ ಫೈನಲ್ ಪ್ರವೇಶಿಸಿದ ದಾಖಲೆಯನ್ನು ಫೆಡರರ್ ಬರೆದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, ಕ್ರೊವೇಷಿಯಾದ ಮರಿನ್ ಸಿಲಿಚ್ ವಿರುದ್ಧ 20ನೇ ಗ್ರ್ಯಾಂಡ್‌'ಸ್ಲಾಂ ಕಿರೀಟಕ್ಕಾಗಿ ಸೆಣಸಾಡಲಿದ್ದಾರೆ.

ಮಿಶ್ರ ಡಬಲ್ಸ್ ಫೈನಲ್‌'ಗೆ ಬೋಪಣ್ಣ ಜೋಡಿ

ಭಾರತದ ರೋಹನ್ ಬೋಪಣ್ಣ 2ನೇ ಗ್ರ್ಯಾಂಡ್‌'ಸ್ಲಾಂ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದಾರೆ. ಮಿಶ್ರ ಡಬಲ್ಸ್ ಸೆಮೀಸ್‌'ನಲ್ಲಿ ಬೋಪಣ್ಣ ಹಾಗೂ ಹಂಗೇರಿಯ ಟಿಮಿಯಾ ಬಾಬೊಸ್ ಜೋಡಿ, ಬ್ರೆಜಿಲ್‌'ನ ಮಾರ್ಸಿಲೊ ಡೆಮೊಲಿನರ್ ಹಾಗೂ ಸ್ಪೇನ್‌'ನ ಮರಿಯಾ ಜೋಸ್ ಜೋಡಿ ವಿರುದ್ಧ 7-5, 5-7, 10-6 ಸೆಟ್‌'ಗಳಲ್ಲಿ ಜಯಗಳಿಸಿತು.