ಟೆನಿಸ್ ಇತಿಹಾಸದಲ್ಲಿ ರೋಜರ್ ಫೆಡರರ್ ಹೊಸ ದಾಖಲೆ
- ದಾಖಲೆಯ 9ನೇ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್
- ಇದೇ ಮೊದಲ ಬಾರಿಗೆ ರೋಜರ್ ಫೆಡರರ್‌ರ 4 ಮಕ್ಕಳು ಕ್ರೀಡಾಂಗಣದಲ್ಲಿ ಹಾಜರು
ಲಂಡನ್: ಸತತ 20ನೇ ವರ್ಷ ವಿಂಬಲ್ಡನ್‌ನಲ್ಲಿ ಆಡುತ್ತಿರುವ ರೋಜರ್ ಫೆಡರರ್, ಈ ಮೈಲಿಗಲ್ಲು ಸ್ಥಾಪಿಸಿದ ಮೊದಲ ಟೆನಿಸಿಗ ಎನ್ನುವ ದಾಖಲೆ ಬರೆದಿದ್ದಾರೆ. 1998ರಲ್ಲಿ ವೃತ್ತಿಪರ ಟೆನಿಸಿಗನಾಗಿದ್ದ ಫೆಡರರ್, ಕಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ದಾಖಲೆಯ 9ನೇ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್, ತಮ್ಮ ಅಭಿಯಾನವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಸ್ ದೊರೆ, ಸರ್ಬಿಯಾದ ದುಸಾನ್ ಲಜೊವಿಚ್ ವಿರುದ್ಧ 6-1, 6-3, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲೂ ವಿಶ್ವ ನಂ.2 ಆಟಗಾರನಿಗೆ ಸುಲಭ ಸವಾಲು ಎದುರಾಗಲಿದೆ.
ರೋಜರ್ ಮಕ್ಕಳು ಹಾಜರ್: ಮೊದಲು
ಇದೇ ಮೊದಲ ಬಾರಿಗೆ ರೋಜರ್ ಫೆಡರರ್‌ರ 4 ಮಕ್ಕಳು ಕ್ರೀಡಾಂಗಣದಲ್ಲಿ ಹಾಜರಿದ್ದರು. ಫೆಡರರ್‌ಗೆ ಇಬ್ಬರು ಅವಳಿಜವಳಿ ಹೆಣ್ಣು ಮಕ್ಕಳು ಹಾಗೂ ಇಬ್ಬರು ಅವಳಿಜವಳಿ ಗಂಡು ಮಕ್ಕಳಿದ್ದು, ಸೋಮವಾರದ ಪಂದ್ಯದ ವೇಳೆ ಪ್ರಮುಖ ಆಕರ್ಷಣೆಯಾಗಿದ್ದರು.