ಈ ಗೆಲುವಿನ ಮೂಲಕ ಜುಲೈ 3ರಿಂದ ಆರಂಭಗೊಳ್ಳಲಿರುವ ವಿಂಬಲ್ಡನ್ ಗ್ರ್ಯಾಂಡ್‌'ಸ್ಲಾಂಗೆ ಫೆಡರರ್ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.
ಹಾಲೆ(ಜೂ.25): ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವಿಂಬಲ್ಡನ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ನಡೆಯುವ ಹಾಲೆ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಜರ್ಮನಿಯ 20 ವರ್ಷದ ಯುವ ಆಟಗಾರ ಅಲೆಕ್ಸಾಂಡರ್ ಜೆವರೆವ್ ವಿರುದ್ಧ 6-1, 6-3 ನೇರ ಸೆಟ್'ಗಳಲ್ಲಿ ಫೈನಲ್ ಪಂದ್ಯ ಗೆದ್ದ ಫೆಡರರ್ ದಾಖಲೆಯ 9ನೇ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕೆಲ ತಿಂಗಳುಗಳ ವಿಶ್ರಾಂತಿ ಬಳಿಕ ಕಳೆದ ವಾರ ಸ್ಟುಟ್'ಗಾರ್ಟ್ ಓಪನ್'ನಲ್ಲಿ ಕಣಕ್ಕಿಳಿದಿದ್ದ ಫೆಡರರ್ ಮೊದಲ ಸುತ್ತಿನಲ್ಲೇ ಟಾಮಿ ಹಾಸ್ ವಿರುದ್ಧ ಸೋಲುಂಡು ನಿರಾಸೆ ಅನುಭವಿಸಿದ್ದರು.
ಈ ಗೆಲುವಿನ ಮೂಲಕ ಜುಲೈ 3ರಿಂದ ಆರಂಭಗೊಳ್ಳಲಿರುವ ವಿಂಬಲ್ಡನ್ ಗ್ರ್ಯಾಂಡ್'ಸ್ಲಾಂಗೆ ಫೆಡರರ್ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.
ಈ ವರ್ಷ ತಾವಾಡಿದ ಕಳೆದ ಮೂರು ಫೈನಲ್'ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದಿದ್ದ ಜೆವರೆವ್'ಗೆ ಫೆಡರರ್ ಭಾರೀ ಆಘಾತ ನೀಡಿದರು. ಕೇವಲ 53 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ಈ ವರ್ಷ ಮಣ್ಣಿನಂಕಣದ ಎಲ್ಲಾ ಪಂದ್ಯಾವಳಿಗಳಿಂದಲೂ ದೂರ ಉಳಿದಿರುವ ಫೆಡರರ್ ಕೇವಲ 2 ಪಂದ್ಯಗಳನ್ನು ಮಾತ್ರ ಸೋತಿದ್ದು, ಆಸ್ಟ್ರೇಲಿಯನ್ ಓಪನ್ ಸೇರಿ 4 ಪ್ರಶಸ್ತಿ ಗೆದ್ದಿದ್ದಾರೆ.
