ನವದೆಹಲಿ(ಮೇ.10): ಐಸಿಸಿ ಏಕದಿನ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ರಿಷಭ್‌ ಪಂತ್‌ಗೆ ಏಕೆ ಸ್ಥಾನ ನೀಡಿಲ್ಲ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ಜೋರಾಗಿ ಸಾಗುತ್ತಿದ್ದು, ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್‌ ಸಹ ಟ್ವೀಟರ್‌ನಲ್ಲಿ ನಾಯಕ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿಯನ್ನು ಪ್ರಶ್ನಿಸಿದ್ದಾರೆ. 

ಈ ನಡುವೆ ಗಾಯಾಳು ಕೇದಾರ್‌ ಜಾಧವ್‌ ಬದಲಿಗೆ ರಿಷಭ್‌ ಪಂತ್‌ಗೆ ಸ್ಥಾನ ಸಿಗಲಿದೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ. ಐಪಿಎಲ್‌ ಪಂದ್ಯದ ವೇಳೆ ಗಾಯಗೊಂಡ ಜಾಧವ್‌, ವಿಶ್ವಕಪ್‌ ವೇಳೆಗೆ ಗುಣಮುಖರಾಗುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಫಿಟ್‌ ಆದರೂ, ವಿಶ್ವಕಪ್‌ ವೇಳೆ ಮತ್ತೆ ಗಾಯಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮೇ 23ರ ವರೆಗೂ ತಂಡ ಬದಲಿಸುವ ಅವಕಾಶ ಬಿಸಿಸಿಐಗಿದ್ದು, ಪಂತ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..

ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್’ರೈಸರ್ಸ್ ಹೈದರಾಬಾದ್ ವಿರುದ್ದ ಕೇವಲ 21 ಎಸೆತಗಳಲ್ಲಿ 49 ರನ್ ಸಿಡಿಸುವ ಮೂಲಕ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಂದು ಆರಂಭವಾಗಲಿದ್ದು, ಭಾರತ ತಂಡವು ಜೂನ್ 06ರಿಂದ ತನ್ನ ಅಭಿಯಾನ ಆರಂಭಿಸಲಿದೆ.