ನವದೆಹಲಿ(ಜು.23]: ‘ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಯುವ ಪ್ರತಿಭೆ ರಿಷಭ್ ಪಂತ್‌ ಅವರದ್ದು ವಿಭಿನ್ನ ಬ್ಯಾಟಿಂಗ್ ಶೈಲಿ’ ಎಂದು ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಟಿ20ಯಲ್ಲಿ ಸ್ಫೋಟಕ ಬ್ಯಾಟ್ಸ್’ಮನ್ ಎಂದೇ ಗುರುತಿಸಿಕೊಂಡಿರುವ ರಿಷಭ್, ಇಂಗ್ಲೆಂಡ್ ಪ್ರವಾಸ ದಲ್ಲಿ ಭಾರತ ‘ಎ’ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದರಿಂದ ಮೊದಲ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ‘ರಿಷಭ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಸ್ಫೋಟಿಸುತ್ತಾರೆ. ಟೆಸ್ಟ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಆಡುತ್ತಾರೆ’ ಎಂದು ದ್ರಾವಿಡ್ ಹೇಳಿದ್ದಾರೆ. 20 ವರ್ಷದ ಎಡಗೈ ಬ್ಯಾಟ್ಸ್’ಮನ್ 2017-18ರ ರಣಜಿ ಟೂರ್ನಿಯಲ್ಲಿ 900ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಜತೆಗೆ ಐಪಿಎಲ್’ನಲ್ಲೂ ಗಮನಾರ್ಹ ಪ್ರದರ್ಶನ ತೋರಿದ್ದಾರೆ ಎಂದು ’ದ ವಾಲ್’ ಖ್ಯಾತಿಯ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. 

ಟೆಸ್ಟ್ ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರ ಜತೆಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರಿಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 01ರಿಂದ ಆರಂಭವಾಗಲಿದೆ.