ಕೋಲ್ಕತಾ[ಮೇ.11]: ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಡೆಲ್ಲಿ ಡೇರ್’ಡೆವಿಲ್ಸ್ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಶಭ್ ಪಂತ್ ಅವರನ್ನು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದೇ ರೀತಿಯ ಸ್ಥಿರ ಪ್ರದರ್ಶನ ತೋರಿದರೆ, ಶೀಘ್ರದಲ್ಲೇ ಪಂತ್ ಭಾರತ ತಂಡಕ್ಕೆ ಲಗ್ಗೆಯಿಡಲಿದ್ದಾರೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಕೋಲ್ಕತಾ ವಿರುದ್ಧ ಕೇವಲ 21 ಎಸೆತಗಳಲ್ಲಿ 62 ರನ್ ಸಿಡಿಸಿದ ಇಶಾನ್ ಕಿಶನ್ ಅವರನ್ನು ದಾದಾ ಕೊಂಡಾಡಿದ್ದಾರೆ.
ಟಿ20 ವಿಭಿನ್ನ ಮಾದರಿಯ ಕ್ರಿಕೆಟ್, ಇಲ್ಲಿ ಅವಕಾಶಗಳೂ ಕೂಡ ತುಂಬಾ ಕಡಿಮೆಯಿರುತ್ತದೆ. ಪಂತ್ ಹಾಗೂ ಕಿಶನ್’ಗೆ ಅವಕಾಶಗಳು ಒದಗಿ ಬರಲಿವೆ. ಆದರೆ ಅವರು ತೋರುವ ಸ್ಥಿರ ಪ್ರದರ್ಶನದ ಮೇಲೆ ಅವರ ಸ್ಥಾನ ನಿರ್ಧಾರವಾಗಲಿದೆ ಎಂದಿದ್ದಾರೆ. ಧೋನಿ ಸ್ಥಾನವನ್ನು ಈ ಇಬ್ಬರು ಕ್ರಿಕೆಟಿಗರು ಸಮರ್ಥವಾಗಿ ತುಂಬಬಲ್ಲರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದಾದಾ, ಸದ್ಯಕ್ಕೆ ದಿನೇಶ್ ಕಾರ್ತಿಕ್ ಅರ್ಹ ಆಟಗಾರನಾದರೂ, ಧೋನಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಪಂತ್ ಕೇವಲ 63 ಎಸೆತಗಳಲ್ಲಿ 128 ರನ್ ಬಾರಿಸಿದ ಶತಕ ಚೊಚ್ಚಲ ಐಪಿಎಲ್’ನ ಮೊದಲ ಪಂದ್ಯದಲ್ಲಿ ಆರ್’ಸಿಬಿ ವಿರುದ್ಧ ಬ್ರೆಂಡನ್ ಮೆಕ್ಲಮ್[158] ಬಾರಿಸಿದ ಶತಕವನ್ನು ನೆನಪಿಸುವಂತಿತ್ತು ಎಂದು ಹೇಳಿದ್ದಾರೆ.