ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಿಸಿಸಿಐ ಪ್ರತಿಕ್ರಿಯೆ ನೀಡಿದ್ದು, ಗಾಳಿಸುದ್ದಿಯನ್ನು ಅಲ್ಲಗಳೆದಿದೆ.
ನವದೆಹಲಿ: ಐಪಿಎಲ್‌ನಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ವದಂತಿ ಹಬ್ಬಿದೆ. ಶನಿವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ವಿಕೆಟ್ ಕೀಪರ್ ರಿಷಭ್ ಪಂತ್‌ರ ಹೇಳಿಕೆಯೊಂದನ್ನು ಆಧರಿಸಿ ಸಾಮಾಜಿಕ ತಾಣಗಳಲ್ಲಿ ಫಿಕ್ಸಿಂಗ್ ವದಂತಿ ಶುರುವಾಗಿದೆ.
ಪಂದ್ಯದ ವೇಳೆ ಪಂತ್, ‘ಈ ಎಸೆತ ಬೌಂಡರಿ ಹೋಗಲಿದೆ’ ಎಂದು ಹೇಳಿದ್ದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಪಂತ್ ಆ ರೀತಿ ಹೇಳುತ್ತಿದ್ದಂತೆ ಸಂದೀಪ್ ಲಮಿಚ್ಚಾನೆ ಎಸೆತವನ್ನು ರಾಬಿನ್ ಉತ್ತಪ್ಪ ಬೌಂಡರಿಗಟ್ಟಿದರು. ಈ ಪ್ರಸಂಗ ಎಲ್ಲರ ಕುತೂಹಲ ಕೆರಳಿಸಿದೆ.
ಸಾಮಾಜಿಕ ತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಪ್ರಸಂಗದ ಕುರಿತು ಬಿಸಿಸಿಐ ತುಟಿಬಿಚ್ಚಿದೆ. ಫಿಕ್ಸಿಂಗ್ ಆರೋಪವನ್ನು ತಳ್ಳಿ ಹಾಕಿರುವ ಬಿಸಿಸಿಐ, ಇಂತಹ ವದಂತಿಗಳು ಕ್ರಿಕೆಟ್‌ಗೆ ಮಾರಕ ಎಂದಿದೆ. ‘ಕ್ಷೇತ್ರರಕ್ಷಕರನ್ನು ಸರಿಯಾದ ಜಾಗದಲ್ಲಿ ನಿಲ್ಲಿಸದ ನಾಯಕ ಶ್ರೇಯಸ್ ಅಯ್ಯರ್‌ಗೆ ಎಚ್ಚರಿಸಲು ರಿಷಭ್ ಆ ರೀತಿ ಹೇಳಿದರು. ಕಾಕತಾಳಿಯ ಎಂಬಂತೆ ಉತ್ತಪ್ಪ ಬೌಂಡರಿ ಬಾರಿಸಿದರು. ಎರಡನ್ನೂ ಒಟ್ಟುಗೂಡಿಸಿ ಕೆಲವರು ಸಾಮಾಜಿಕ ತಾಣಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
