ಸಿಡ್ನಿ[ಫೆ.08]: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗಾಗಿ ಎಲ್ಲಾ ತಂಡಗಳು ಸಜ್ಜಾಗುತ್ತಿದ್ದು, ಆರನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಮ್ಮ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅನುಭವ ಬಳಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಆಸಿಸ್ ಕ್ರಿಕೆಟ್’ನ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ.

ವಿಶ್ವಕಪ್ ಟೂರ್ನಿ ತಯಾರಿ ಬೆನ್ನಲ್ಲೇ ಆಸ್ಟ್ರೇಲಿಯಾಗೆ ಮತ್ತೊಂದು ಶಾಕ್!

ಇದೇ ಮೇ 30ರಿಂದ ಇಂಗ್ಲೆಂಡ್’ನಲ್ಲಿ ಜರುಗಲಿರುವ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಕೋಚ್ ಜಸ್ಟೀನ್ ಲ್ಯಾಂಗರ್ ಜತೆ ಕೋಚ್ ಆಗಿ ಪಾಂಟಿಂಗ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಸುದ್ದಿ ಖಚಿತವಾಗುವ ಮೊದಲೇ ಆಸಿಸ್ ವೇಗದ ಬೌಲಿಂಗ್ ಕೋಚ್ ಡೇವಿಡ್ ಸಾಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಿಕಿ ಪಾಂಟಿಂಗ್ ತಂಡದೊಂದಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಾತಾವರಣದಲ್ಲಿ ಹೇಗೆ ನಡೆಸಬೇಕು ಎಂದು ಬ್ಯಾಟ್ಸ್’ಮನ್’ಗಳಿಗೆ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ. 

ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

44 ವರ್ಷದ ಪಾಂಟಿಗ್ 2017-18ರ ವರೆಗೂ ಆಸ್ಟ್ರೇಲಿಯಾ ಟಿ20 ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ರಿಕಿ ಪಾಂಟಿಂಗ್ 1999ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.