Asianet Suvarna News Asianet Suvarna News

ರೀತಿಕಾಗೆ ಅಂಡರ್‌-23 ವಿಶ್ವ ಚಾಂಪಿಯನ್‌ ಪಟ್ಟ! ಚಿನ್ನ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು

ಆಲ್ಬೇನಿಯಾದ ಟಿರಾನಾದಲ್ಲಿ ನಡೆದ ಕೂಟದ ಮಹಿಳೆಯರ 76 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಅಮೆರಿಕದ ಕೆನೆಡೆ ಬ್ಲೇಡ್ಸ್‌ ವಿರುದ್ಧ ಗೆದ್ದರು. ಸೆಮೀಸ್‌ನಲ್ಲಿ ಉಕ್ರೇನ್‌ನ ಅನಸ್ತಾಸಿಯಾ, ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ತಾಲಿಸ್ಮಿನೋವಾ ವಿರುದ್ಧ ಜಯಿಸಿದ್ದರು.

Reetika crowned U 23 World Wrestling Champion becomes first Indian woman wrestler to achieve feat kvn
Author
First Published Oct 28, 2023, 12:48 PM IST

ನವದೆಹಲಿ(ಅ.28): ಅಂಡರ್‌-23 ಕುಸ್ತಿ ವಿಶ್ವ ಚಾಂಪಿಯನ್‌ನಲ್ಲಿ ಚಿನ್ನ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎನ್ನುವ ದಾಖಲೆಯನ್ನು ರೀತಿಕಾ ಬರೆದಿದ್ದಾರೆ.

ಆಲ್ಬೇನಿಯಾದ ಟಿರಾನಾದಲ್ಲಿ ನಡೆದ ಕೂಟದ ಮಹಿಳೆಯರ 76 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಅಮೆರಿಕದ ಕೆನೆಡೆ ಬ್ಲೇಡ್ಸ್‌ ವಿರುದ್ಧ ಗೆದ್ದರು. ಸೆಮೀಸ್‌ನಲ್ಲಿ ಉಕ್ರೇನ್‌ನ ಅನಸ್ತಾಸಿಯಾ, ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ತಾಲಿಸ್ಮಿನೋವಾ ವಿರುದ್ಧ ಜಯಿಸಿದ್ದರು.

ಹಾಕಿ: ಭಾರತ-ಪಾಕ್‌ ಪಂದ್ಯ 3-3ರಲ್ಲಿ ಡ್ರಾ

ಜೋಹರ್‌ ಬಹ್ರು: ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯನ್ನು ಹಾಲಿ ಚಾಂಪಿಯನ್‌ ಭಾರತ ಡ್ರಾನೊಂದಿಗೆ ಆರಂಭಿಸಿದೆ. ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ 3-3ರಲ್ಲಿ ಡ್ರಾ ಮಾಡಿಕೊಂಡಿತು. 58ನೇ ನಿಮಿಷದಲ್ಲಿ 2-3ರ ಹಿನ್ನಡೆಯಲ್ಲಿದ್ದ ಭಾರತ ಸೋಲಿನ ಆತಂಕಕ್ಕೆ ಸಿಲುಕಿತ್ತು. ಆದರೆ 59ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತ ಸೋಲಿನಿಂದ ಪಾರಾಯಿತು. 2ನೇ ಪಂದ್ಯವನ್ನು ಶನಿವಾರ ಮಲೇಷ್ಯಾ ವಿರುದ್ಧ ಆಡಲಿದೆ.

Asian Para Games 2023: ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ ಭಾರತಕ್ಕೆ 100 ಪದಕಗಳು ಖಾತ್ರಿ..!

ರಾಜ್ಯದ ಸಾಧಕ ಅಥ್ಲೀಟ್ಸ್‌ಗೆ ಬಹುಮಾನಕ್ಕೆ ಅರ್ಜಿ ಅಹ್ವಾನ

ಬೆಂಗಳೂರು: 2021 ಮತ್ತು 2022ನೇ ಸಾಲಿನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಂದ ರಾಜ್ಯ ಸರ್ಕಾರ ಬಹುಮಾನ ಮೊತ್ತಕ್ಕೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಕ್ರೀಡಾ ಇಲಾಖೆ ಪ್ರಕಟಣೆ ಹೊರಡಿಸಿದ್ದು, ನ.30ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಗಡುವು ವಿಧಿಸಿದೆ. 

ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ರಾಷ್ಟ್ರೀಯ ಕ್ರೀಡಾಕೂಟ, ಜೂನಿಯರ್‌-ಸಬ್‌ ಜೂನಿಯರ್‌ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರು ಬೆಂಗಳೂರಿನಲ್ಲಿರುವ ಕ್ರೀಡಾ ಇಲಾಖೆ ಕೇಂದ್ರ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ರಾಷ್ಟ್ರೀಯ ಕ್ರೀಡಾಕೂಟ: ರಾಜ್ಯಕ್ಕೆ ಮತ್ತೆರಡು ಪದಕ

ಪಣಜಿ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಮತ್ತೆರಡು ಪದಕಗಳನ್ನು ಬಾಚಿಕೊಂಡಿದೆ. ಶುಕ್ರವಾರ ಮಾರ್ಷಲ್‌ ಆರ್ಟ್ಸ್‌ ಕ್ರೀಡೆಗಳಲ್ಲಿ ಒಂದಾದ ಪೆನ್ಚಾಕ್‌ ಸಿಲಾತ್‌ನಲ್ಲಿ ರಾಜ್ಯಕ್ಕೆ ತಲಾ ಒಂದು ಬೆಳ್ಳಿ, ಕಂಚಿನ ಪದಕ ಲಭಿಸಿತು. ಇದರೊಂದಿಗೆ ರಾಜ್ಯ ಒಟ್ಟು 8 ಪದಕಗೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಇನ್ನು, ರಾಜ್ಯದ ಮಹಿಳಾ ಬಾಸ್ಕೆಟ್‌ಬಾಲ್‌ ತಂಡ ಫೈನಲ್‌ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಉತ್ತರ ಪ್ರದೇಶ ವಿರುದ್ಧ 80-47 ಅಂತರದಲ್ಲಿ ಜಯಗಳಿಸಿತು. ಫೈನಲ್‌ನಲ್ಲಿ ಕೇರಳ ವಿರುದ್ಧ ಆಡಲಿದೆ.

ಜಾವೆಲಿನ್‌ ಪ್ರತಿಭೆ ಸ್ವರೂಪ್‌ಗೆ ಕೆಒಎ ಆರ್ಥಿಕ ನೆರವು

ಬೆಂಗಳೂರು: ಮಂಡ್ಯದ ಪಾಂಡವಪುರದ ಯುವ ಜಾವೆಲಿನ್‌ ಥ್ರೋ ಪಟು 18ರ ಸ್ವರೂಪ್‌ಗೆ ಕರ್ನಾಟಕ ಒಲಿಂಪಿಕ್‌ ಸಮಿತಿ(ಕೆಒಎ) ವತಿಯಿಂದ 20 ಸಾವಿರ ರು. ನಗದು ಹಾಗೂ 1.2 ಲಕ್ಷ ರು. ಮೌಲ್ಯದ ಜಾವೆಲಿನ್‌ ಅನ್ನು ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಕಾರ್ಯದರ್ಶಿ ಟಿ.ಅನಂತರಾಜು ಶುಕ್ರವಾರ ಹಸ್ತಾಂತರಿಸಿದರು. ಅಲ್ಲದೆ ಹರ್ಯಾಣದ ಸೋನಿಪತ್‌ನಲ್ಲಿರುವ ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟರು. ಸ್ವರೂಪ್‌ ಕಿರಿಯರ ರಾಷ್ಟ್ರೀಯ ಕೂಟ, ದಕ್ಷಿಣ ವಲಯ ಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ದಾವಣಗೆರೆ ಓಪನ್‌ ಟೆನಿಸ್‌: ನಿಕಿ ಸೆಮೀಸ್‌ಗೆ

ದಾವಣಗೆರೆ: ದಾವಣಗೆರೆ ಐಟಿಎಫ್‌ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಕರ್ನಾಟಕದ ನಿಕಿ ಪೂಣಚ್ಚ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ 8ನೇ ಶ್ರೇಯಾಂಕಿತ ನಿಕಿ, ಮನೀಶ್‌ ವಿರುದ್ಧ 6-4, 6-3ರಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಅಗ್ರ ಶ್ರೇಯಾಂಕಿತ, ಅಮೆರಿಕದ ನಿಕ್‌ ಚಾಪೆಲ್‌ ಎದುರಾಗಲಿದ್ದಾರೆ. ರಾಮ್‌ಕುಮಾರ್‌ ಕೂಡ ಸೆಮೀಸ್‌ಗೇರಿದ್ದಾರೆ. ಡಬಲ್ಸ್‌ನಲ್ಲಿ ಸಾಯಿ ಕಾರ್ತಿಕ್‌-ಮನೀಶ್‌ ಹಾಗೂ ಸಿದ್ಧಾಂತ್‌-ವಿಷ್ಣುವರ್ಧನ್‌ ಫೈನಲ್‌ಗೇರಿದ್ದು, ಶನಿವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
 

Follow Us:
Download App:
  • android
  • ios