ಟೀಂ ಇಂಡಿಯಾದ ಮಾಜಿ ನಾಯಕನಿಗೆ ಏನಾಗಿದೆ..? ಲಂಕಾ ವಿರುದ್ಧದ ಸರಣಿಯಲ್ಲಿ ಒಂದರ ಬಳಿಕ ದರಂತೆ ದಾಖಲೆಗಳನ್ನು ಮುರಿದಿದ್ದ ಧೋನಿ, ತಮ್ಮ ದಾಖಲೆಯ ಜರ್ನಿಯನ್ನ ಕಾಂಗರೂಗಳ ವಿರುದ್ಧವೂ ಮುಂದುವರಿಸಿದ್ದಾರೆ. ನಿನ್ನೆಯ ಮೊದಲ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಮಹಿ ನೂತನ ದಾಖಲೆಯನ್ನ ನಿರ್ಮಿಸಿದರು.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿ ಸಿಂಹಳೀಯರ ಬೇಟೆಯಾಡಿದ್ದ ಧೋನಿ, ಈಗ ಕಾಂಗರೂಗಳನ್ನ ಬೇಟೆಯಾಡುತ್ತಿದ್ದಾರೆ. ಆಸೀಸ್​​​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ಮಹಿ, ಕಾಂಗರೂಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಎಂದಿನಂತೆ ಬೌಂಡರಿ ಸಿಕ್ಸರ್​​​ಗಳಿಂದ ಭಾರತದ ಅಭಿಮಾನಿಗಳನ್ನ ರಂಜಿಸಿದ್ರು. ತನ್ನ 2ನೇ ತವರು ಚೆನ್ನೈನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಎರಡು ಸಿಕ್ಸ್​, 4 ಬೌಂಡ್ರಿ ಬಾರಿಸಿದ್ರು.

ತ್ರಿಮೂರ್ತಿಗಳ ಸಾಲಿಗೆ ಸೇರಿದ ಮಹಿ

ದಾಖಲೆ ವೀರ ಮಹೇಂದ್ರ ಸಿಂಗ್​ ಧೋನಿ ಮತ್ತೊಂದು ದಾಖಲೆ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಧೋನಿ ಅರ್ಧಶತಕ ದಾಖಲಿಸುತ್ತಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅಪರೂಪದ ಮೈಲಿಗಲ್ಲನ್ನ ಮುಟ್ಟಿದ್ರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ರು.

ಧೋನಿ 90 ಟೆಸ್ಟ್'​​​ಗಳಲ್ಲಿ 33 ಅರ್ಧಶತಕ ಬಾರಿಸಿದ್ದರೆ, 302 ಏಕದಿನ ಪಂದ್ಯಗಳಲ್ಲಿ 66 ಹಾಫ್​​ ಸೆಂಚುರಿಗಳನ್ನ ಹೊಡೆದಿದ್ದಾರೆ. ಇನ್ನೂ 78 ಟಿ20 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ದಾಖಲಿಸಿದ್ದಾರೆ.

ಧೋನಿ 100 ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮಹುಗೂ ಮುನ್ನ ಭಾರತದ ಕ್ರಿಕೆಟ್​​ ಲಜೆಂಡ್​​ಗಳಾದ ಸಚಿನ್​​ ತೆಂಡೂಲ್ಕರ್​, ರಾಹುಲ್ ದ್ರಾವಿಡ್​​​ ಮತ್ತು ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದರು.

ಲಂಕಾಗೆ ಸಾಧ್ಯವಾಗದಿದ್ದು ಆಸೀಸ್​ಗೆ ಸಾಧ್ಯವಾಯ್ತು

ಕಳೆದ 5 ಇನ್ನಿಂಗ್ಸ್​​​ಗಳಲ್ಲಿ ಧೋನಿ ಔಟೇ ಆಗಿರಲಿಲ್ಲ. ಲಂಕಾ ವಿರುದ್ಧ ಆಡಿದ್ದ ಕೊನೆಯ 4 ಏಕದಿನ ಪಂದ್ಯ ಮತ್ತು ಏಕೈಕ ಟಿ20 ಪಂದ್ಯದಲ್ಲಿ ಮಹಿಯನ್ನ ಔಟ್ ಮಾಡಲು ಸಿಂಹಳೀಯರಿಂದ ಸಾಧ್ಯವಾಗಿಯೇ ಇರಲಿಲ್ಲ. ಲಂಕನ್ನರು ಧೊನಿಯನ್ನ ಔಟ್​​​ ಮಾಡಲಾಗದೇ ಸುಸ್ತಾಗಿಬಿಟ್ಟಿದ್ರು.

ಸತತ 5 ಇನ್ನಿಂಗ್ಸ್​​ಗಳಲ್ಲಿ ಔಟಾಗದೆ 6ನೇ ಇನ್ನಿಂಗ್ಸ್​​​ನಲ್ಲಿ ಆಸೀಸ್​​​ ವಿರುದ್ಧ ಆಡಿದ ಧೋನಿ ಕೊನೆಯ ಓವರ್​​ನಲ್ಲಿ ಔಟಾಗಿಬಿಟ್ರು. ಇದರೊಂದಿಗೆ ಸತತ 5 ಯಶಸ್ವಿ ಇನ್ನಿಂಗ್ಸ್​​ಗೆ ಬ್ರೇಕ್​ ಬಿತ್ತು. ಅಷ್ಟೇ ಅಲ್ಲ 242 ರನ್​ ಹೊಡೆದ ನಂತರ ಮಹಿ ಔಟಾಗಿದ್ದು.

ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಅಜೇಯ 45 ರನ್​ ಹೊಡೆದಿದ್ದ ಧೋನಿ, 3ನೇ ಏಕದಿನ ಪಂದ್ಯದಲ್ಲಿ ಅಜೇಯ 67, 4ನೇ ಪಂದ್ಯದಲ್ಲಿ ಅಜೇಯ 49, 5ನೇ ಪಂದ್ಯದಲ್ಲಿ ಅಜೇಯ 1 ರನ್​​​ ಗಳಿಸಿದ್ದರು. ಇನ್ನು ಲಂಕಾ ವಿರುದ್ಧವೇ ಏಕೈಕ ಟಿ20 ಪಂದ್ಯದಲ್ಲಿ 1 ರನ್​ಗಳಿಸಿ ಅಜೇಯರಾಗಿದ್ದರು. ಆದ್ರೆ ನಿನ್ನೆ ಆಸೀಸ್​​​ ವಿರುದ್ಧ 79 ರನ್​​ ಗಳಿಸಿ ಔಟಾಗೋ ಮೂಲಕ, ಒಟ್ಟು ಔಟಾಗದೆ 242 ರನ್​ಗಳಿಸಿದ ಸಾಧನೆ ಮಾಡಿದ್ರು.

ಒಟ್ಟಿನಲ್ಲಿ ಧೋನಿಗೆ ಶುಕ್ರದೆಸೆ ಶುರುವಾಗಿದೆ ಅನಿಸ್ತಿದೆ. ಬ್ಯಾಕ್​ ಟು ಬ್ಯಾಕ್​ ಸೂಪರ್​​​ ಇನ್ನಿಂಗ್ಸ್​​ಗಳ ಜೊತೆಗೆ ಬ್ಯಾಕ್​ ಟು ಬ್ಯಾಕ್​​ ದಾಖಲೆಗಳನ್ನ ಮಹಿ ಸಾಧಿಸುತ್ತಿದ್ದಾರೆ. ಅವರ ಈ ಅದ್ಭುತ ಫಾರ್ಮ್​ ಹೀಗೆ ಮುಂದುವರಿಯಲಿ. ಮತ್ತಷ್ಟು ದಾಖಲೆಗಳು ಧೋನಿ ಹೆಸರಿಗೆ ವರ್ಗಾವಣೆಯಾಗಲಿ ಎಂಬುದು ಅವರ ಕೋಟ್ಯಾಂತರ ಅಭಿಮಾನಿಗಳ ಆಶಯ.