Wrestlers Protest ಮಂಪರು ಪರೀಕ್ಷೆಗೆ ಸಿದ್ದ ಆದರೆ ಒಂದು ಕಂಡೀಷನ್: ಬ್ರಿಜ್‌ಭೂಷಣ್ ಸಿಂಗ್
ಬ್ರಿಜ್‌ಭೂಷಣ್ ಬಂಧನಕ್ಕೆ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಮಂಪರು ಪರೀಕ್ಷೆಗೆ ತಾವು ಸಿದ್ದವೆಂದ ಬ್ರಿಜ್‌ಭೂಷಣ್ ಸಿಂಗ್
ಕುಸ್ತಿಪಟುಗಳಿಗೆ ಒಂದು ಷರತ್ತು ಹಾಕಿದ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ
ನವದೆಹಲಿ(ಮೇ.22): ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆ ದಿನವೇ ಸಂಸತ್ ಎದುರು ‘ಮಹಾ ಪಂಚಾಯತ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಉದ್ಘಾಟನೆ ನಡೆಸಲಿರುವ ಕಾರಣ ಕುಸ್ತಿಪಟುಗಳ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.
ಭಾನುವಾರ ಕುಸ್ತಿಪಟು ಸಾಕ್ಷಿ ಮಲಿಕ್, ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹಾಗೂ ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣದ ರೈತರು ಸೇರಿದಂತೆ ಖಾಪ್ ಪಂಚಾಯತ್ ಸದಸ್ಯರು ಹರ್ಯಾಣದ ರೋಟಕ್ನಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು. ಜೊತೆಗೆ ಮೇ 23ರಂದು ಇಂಡಿಯಾ ಗೇಟ್‌ಗೆ ಮೇಣದ ಬತ್ತಿ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.
ಸಾವೆ, ಗೆಮೆಚು ಬೆಂಗಳೂರು 10ಕೆ ಓಟದಲ್ಲಿ ಚಾಂಪಿಯನ್!
ಈ ಬಗ್ಗೆ ಮಾಹಿತಿ ನೀಡಿರುವ ಭಜರಂಗ್ ಪೂನಿಯಾ, ‘ಬ್ರಿಜ್ರನ್ನು ಬಂಧಿಸಲು ಮೇ 21ರ ಗಡುವು ನೀಡಲಾಗಿತ್ತು. ಆದರೆ ಬೇಡಿಕೆ ಈಡೇರಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಮಹಾಪಂಚಾಯತ್ನಲ್ಲಿ ಮಹಿಳಾ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ದೇಶದೆಲ್ಲೆಡೆಯಿಂದ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದಿದ್ದಾರೆ.
ಐಪಿಎಲ್ ವೀಕ್ಷಣೆಗೆ ಪ್ರವೇಶವಿಲ್ಲ: ಆಕ್ರೋಶ!
ಶನಿವಾರದ ಐಪಿಎಲ್ ಪಂದ್ಯ ವೀಕ್ಷಿಸಲು ಕುಸ್ತಿಪಟುಗಳು ದೆಹಲಿಯ ಕ್ರೀಡಾಂಗಣಕ್ಕೆ ಆಗಮಿಸಿದರೂ ಅವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ ಘಟನೆ ನಡೆಯಿತು. ಕುಸ್ತಿಪಟುಗಳು ಪ್ರತಿಭಟನೆಗೆ ಬೆಂಬಲ ಸೂಚಿಸುವ ಬರಹವಿರುವ ಟಿ-ಶರ್ಚ್ ಧರಿಸಿ ಬಂದಿದ್ದರು. ಅವರನ್ನು ಪೊಲೀಸರು ತಡೆದಿದ್ದು, ಮೈದಾನದ ಒಳ ಹೋಗಲು ಬಿಡಲಿಲ್ಲ. ಪಂದ್ಯದ ಟಿಕೆಟ್ ಖರೀದಿಸಿದ್ದರೂ ನಮ್ಮನ್ನು ಮೈದಾನಕ್ಕೆ ಬಿಡಲಿಲ್ಲ ಎಂದು ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಮಾನ್ಯವಿರುವ ಟಿಕೆಟ್, ಪಾಸ್ ಹೊಂದಿದ್ದ ಯಾರನ್ನೂ ತಡೆದಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಮಂಪರು ಪರೀಕ್ಷೆಗೆ ಸಿದ್ಧ: ಬ್ರಿಜ್‌ಭೂಷಣ್!
ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಿರುವ ಬ್ರಿಜ್‌ಭೂಷಣ್ ಮಂಪರು ಪರೀಕ್ಷೆಗೆ ಒಳಗಾಗಲಿ ಎಂಬ ಕುಸ್ತಿಪಟುಗಳ ಸವಾಲನ್ನು ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಸ್ವೀಕರಿಸಿದ್ದು, ಮಂಪರು ಪರೀಕ್ಷೆಗೆ ಸಿದ್ಧ ಎಂದಿದ್ದಾರೆ. ‘ನನ್ನ ಜೊತೆ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್ ಕೂಡಾ ಮಂಪರು ಪರೀಕ್ಷೆಗೆ ಒಳಗಾಗಬೇಕು. ಅವರು ಮಂಪರು ಪರೀಕ್ಷೆಗೆ ಸಿದ್ಧವಿದ್ದರೆ ನಾನು ಪತ್ರಿಕಾಗೋಷ್ಠಿ ಮೂಲಕ ಇದನ್ನು ಘೋಷಿಸುತ್ತೇನೆ’ ಎಂದು ಬ್ರಿಜ್‌ಭೂಷಣ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದಿದ್ದಾರೆ.
ಈ ಮೊದಲು ಕುಸ್ತಿಪಟುಗಳನ್ನು ಟೀಕಿಸುವ ಭರದಲ್ಲಿ ಬ್ರಿಜ್‌ಭೂಷಣ್, ದೇಶಕ್ಕಾಗಿ ಗೆದ್ದ ಪದಕಗಳ ಬಗ್ಗೆ ಹಗುರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ‘ನೀವು ರಾಜೀನಾಮೆ ನೀಡದಿದ್ದರೆ ಕುಸ್ತಿಪಟುಗಳು ಪದಕಗಳನ್ನು ವಾಪಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರಲ್ಲ’ ಎಂದು ಪ್ರಶ್ನಿಸಿದಾಗ, ಭೂಷಣ್ ಸಿಟ್ಟಾಗಿದ್ದಾರೆ. ‘ವಾಪಸ್ ಕೊಡುವುದಾದರೆ ಇಷ್ಟು ವರ್ಷ ಪಡೆದಿರುವ ಬಹುಮಾನದ ಹಣವನ್ನು ಕೊಡಲಿ. ಪದಕಗಳ ಮೌಲ್ಯ 15 ರುಪಾಯಿ ಮಾತ್ರ’ ಎಂದಿದ್ದರು.
ಭೂಷಣ್‌ರ ಈ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು, ‘ಕ್ರೀಡಾಪಟುಗಳನ್ನು ಭೂಷಣ್ ಎಷ್ಟುಕೀಳಾಗಿ ನೋಡುತ್ತಾರೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಇಷ್ಟುವರ್ಷಗಳ ಪರಿಶ್ರಮದ ಮೌಲ್ಯ ಕೇವಲ 15 ರು. ಎನ್ನುವ ಮೂಲಕ ಅವಮಾನಿಸಿದ್ದಾರೆ’ ಎಂದಿದ್ದಾರೆ.