ಸಾವೆ, ಗೆಮೆಚು ಬೆಂಗಳೂರು 10ಕೆ ಓಟದಲ್ಲಿ ಚಾಂಪಿಯನ್!
15ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಯಶಸ್ವಿ
ಕೀನ್ಯಾದ ಸೆಬಾಸ್ಟಿಯನ್ ಸಾವೆ ಹಾಗೂ ಇಥಿಯೋಪಿಯಾದ ತ್ಸೆಹಾಯ್ ಗೆಮೆಚು ಚಾಂಪಿಯನ್
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆ
ಬೆಂಗಳೂರು(ಮಾ.22): 15ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಓಟದಲ್ಲಿ ಕೀನ್ಯಾದ ಸೆಬಾಸ್ಟಿಯನ್ ಸಾವೆ ಹಾಗೂ ಇಥಿಯೋಪಿಯಾದ ತ್ಸೆಹಾಯ್ ಗೆಮೆಚು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಒಟ್ಟಾರೆ 27000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ವಿಶ್ವದ 5ನೇ ಅತಿವೇಗದ 10ಕೆ ಓಟಗಾರ ಖ್ಯಾತಿಯ ಸಾವೆ ಪುರುಷರ ವಿಭಾಗದಲ್ಲಿ 27 ನಿಮಿಷ 58.24 ಸೆಕೆಂಡ್ಗಳಲ್ಲಿ ಕ್ರಮಿಸಿದರು. ಕಳೆದ ಬಾರಿ ಚಾಂಪಿಯನ್ ಕೀನ್ಯಾದ ನಿಕೋಲಸ್ ಕಿಪ್ಕೋರಿರ್(28:05.09) 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳಾ ವಿಭಾಗದಲ್ಲಿ ವಿಶ್ವ ಕ್ರಾಸ್ ಕಂಟ್ರಿ ಕೂಟದ ಚಾಂಪಿಯನ್ ಗೆಮೆಚು 31:38 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ರೇಸ್‌ನ ಅಗ್ರ 3 ಸ್ಥಾನಗಳೂ ಇಥಿಯೋಪಿಯಾದ ಅಥ್ಲೀಟ್‌ಗಳ ಪಾಲಾಯಿತು. ಪ್ರಶಸ್ತಿ ವಿಜೇತ ಅಥ್ಲೀಟ್ಸ್ಗೆ 26000 ಅಮೆರಿಕನ್ ಡಾಲರ್(ಅಂದಾಜು 21.55 ಲಕ್ಷ ರು.) ಬಹುಮಾನ ಮೊತ್ತ ಲಭಿಸಿತು.
ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಅಶ್ವಥ್ನಾರಾಯಣ, ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಓಟದ ರಾಯಭಾರಿ, ಒಲಿಂಪಿಕ್ಸ್ 400 ಮೀ. ಚಿನ್ನ ವಿಜೇತೆ ಅಮೆರಿಕದ ಸಾನ್ಯಾ ರಿಚರ್ಡ್ಸ್ ರಾಸ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಭಾರತದ ಮುರಳಿ, ತಾಮ್ಶಿಗೆ ಪ್ರಶಸ್ತಿ
ಸ್ಪರ್ಧೆಯಲ್ಲಿ ತಾರಾ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಜೊತೆ ಭಾರತದ ಅಗ್ರ ಓಟಗಾರರೂ ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ 29 ನಿಮಿಷ 58.03 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಮುರಳಿ ಗಾವಿತ್ ಚಾಂಪಿಯನ್ ಎನಿಸಿಕೊಂಡರೆ, ಹರ್ಮನ್ಜೋತ್ ಸಿಂಗ್(29:59.10) ದ್ವಿತೀಯ, ಉತ್ತಮ್ ಚಾಂದ್(29:59.24) 3ನೇ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ 19 ವರ್ಷದ ತಾಮ್ಶಿ ಸಿಂಗ್ 34:12 ನಿಮಿಷಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಪೂನಂ(34:29), ಪ್ರೀನು ಯಾದವ್)34:30) ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು. ಎರಡೂ ವಿಭಾಗದ ವಿಜೇತರು ತಲಾ 2.75 ಲಕ್ಷ ರು. ಬಹುಮಾನ ಮೊತ್ತ ಪಡೆದರು.
IPL 2023 ಆರ್‌ಸಿಬಿ ಕನಸು ಛಿದ್ರ, ಗುಜರಾತ್ ಗೆಲುವಿನಿಂದ ಮುಂಬೈಗೆ ಖುಲಾಯಿಸಿದ ಪ್ಲೇಆಫ್ ಅದೃಷ್ಠ!
ಗೋಲ್ಡನ್ ಗ್ರ್ಯಾನ್ಪ್ರಿ: ಕಂಚು ಗೆದ್ದ ಶೈಲಿ ಸಿಂಗ್
ಯೊಕೊಹಮಾ(ಜಪಾನ್): ಭಾರತದ ಯುವ ಅಥ್ಲೀಟ್ ಶೈಲಿ ಸಿಂಗ್ ಇಲ್ಲಿ ನಡೆದ ಗೋಲ್ಡನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಲಾಂಗ್ ಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2021ರಲ್ಲಿ ಅಂಡರ್-20 ವಿಶ್ವ ಅಥ್ಲೆಟಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ 19 ವರ್ಷದ ಶೈಲಿಗೆ 2023ರಲ್ಲಿ ಇದು ಮೊದಲ ಅಂತಾರಾಷ್ಟ್ರೀಯ ಕೂಟವಾಗಿದ್ದು, ಪದಕದೊಂದಿಗೆ ಶುಭಾರಂಭ ಮಾಡಿದ್ದಾರೆ. ಅವರು ಸ್ಪರ್ಧೆಯ 3ನೇ ಪ್ರಯತ್ನದಲ್ಲಿ 6.65 ಮೀ. ದೂರಕ್ಕೆ ಜಿಗಿದು 3ನೇ ಸ್ಥಾನಿಯಾದರು. ಜರ್ಮನಿಯ ಮರೀಸ್ ಲುಜೊಲೊ(6.79 ಮೀ.) ಚಿನ್ನ, ಆಸ್ಪ್ರೇಲಿಯಾದ ಬ್ರೂಕ್(6.77 ಮೀ.) ಬೆಳ್ಳಿ ಜಯಿಸಿದರು.