ಬೆಂಗಳೂರು(ಫೆ.23): ಐಪಿಎಲ್‌ 12ನೇ ಆವೃತ್ತಿ ಹತ್ತಿರವಾಗುತ್ತಿದಂತೆ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮತ್ತೆ, ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದಾರೆ. ಆದರೆ ತಂಡದ ಅಭಿಮಾನಿಗಳ ಗುಂಪೊಂದು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ‘ಈ ಸಲ ಕಪ್‌ ನಮ್ದೇ’ ಹೆಸರಲ್ಲಿ ಕೆಫೆಯೊಂದನ್ನು ಆರಂಭಿಸಿದೆ.

ಸಿಲಿಕಾನ್‌ ಸಿಟಿಯ ಹೃದಯ ಭಾಗವಾದ ಜಯನಗರದಲ್ಲಿ ಕೆಫೆ ಸ್ಥಾಪಿಸಲಾಗಿದ್ದು ಫೆ.24, ಭಾನುವಾರ ಲೋಕಾರ್ಪಣೆಗೊಳ್ಳಲಿದೆ. ಆರಂಭವಾಗುವ ಮೊದಲೇ ಸಾಮಾಜಿಕ ತಾಣಗಳಲ್ಲಿ ಈ ಕೆಫೆ, ಅಭಿಮಾನಿಗಳನ್ನು ಆಕರ್ಷಿಸಿದೆ.

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಇಂಜಿನಿಯರಿಂಗ್‌ ಪದವೀಧರ ಚಿತ್ರದುರ್ಗದ ಭೀಮ ಸಮುದ್ರ ಮೂಲದ ಪ್ರಖ್ಯಾತ್‌ ಹಾಗೂ ಸಹೋದರ ಸ್ವಾಗತ್‌ ಈ ಕೆಫೆ ತೆರೆಯುತ್ತಿದ್ದಾರೆ. 60 ಲಕ್ಷ ರುಪಾಯಿ ವೆಚ್ಚದಲ್ಲಿ ಕೆಫೆಯನ್ನು ನಿರ್ಮಿಸಲಾಗಿದೆ. ಕ್ರಿಕೆಟ್‌ ಅಭಿಮಾನಿಗಳನ್ನು ಗಮನದಲ್ಲಿರಿಸಿಕೊಂಡು ಕೆಫೆಯ ಒಳವಿನ್ಯಾಸ ಮಾಡಲಾಗಿದೆ. ಇಲ್ಲಿಗೆ ಬರುವ ಕ್ರೀಡಾಭಿಮಾನಿಗಳು ಆಹ್ಲಾದಕರ ಕಾಫಿ ಹೀರುತ್ತಾ ದೊಡ್ಡ ಪರದೆಯ ಮೇಲೆ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಐಪಿಎಲ್‌ನಲ್ಲಿ RCB ನಿರ್ಮಿಸಿದೆ ಅಪರೂಪದ ರೆಕಾರ್ಡ್ !

ಥೇಟ್‌ ಕ್ರಿಕೆಟ್‌ ಕ್ರೀಡಾಂಗಣದಂತೆ ಕೆಫೆಯ ಒಳ ವಿನ್ಯಾಸ ಮಾಡಲಾಗಿದೆ. ಹೆಲ್ಮೆಟ್‌ ಒಳಗೆ ಲೈಟ್‌, ಮೇಲ್ಚಾವಣಿಯಲ್ಲಿ ಕ್ರಿಕೆಟ್‌ ಪಿಚ್‌ ಜೊತೆಯಲ್ಲಿ ಸ್ಟಂಪ್‌, ಗೋಡೆಗಳ ಸುತ್ತ ಆರ್‌ಸಿಬಿ ಆಟಗಾರರ ಜೆರ್ಸಿಗಳು, ಅದರ ಒಂದು ಭಾಗದಲ್ಲಿ ರಾಹುಲ್‌ ದ್ರಾವಿಡ್‌ ಅವರ ಚಿತ್ರ. ಪ್ಯಾಡ್‌ಗಳು, ಚೆಂಡುಗಳು ಹೀಗೆ ಒಂದೊಂದು ವಿಭಿನ್ನವಾಗಿ ಮೂಡಿಬಂದಿವೆ. ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಒಂದು ಮಿನಿ ಕ್ರೀಡಾಂಗಣವನ್ನೇ ಸೃಷ್ಟಿಸಲಾಗಿದೆ.

ವರದಿ: ಧನಂಜಯ ಎಸ್‌.ಹಕಾರಿ, ಕನ್ನಡಪ್ರಭ