ತಾವಾಡಿದ 32ನೇ ಟೆಸ್ಟ್'ನಲ್ಲೇ 150 ವಿಕೆಟ್ ಕಿತ್ತ ಸಾಧನೆ ಮಾಡಿರುವ ಜಡ್ಡು, ದ್ವಿತೀಯ ಟೆಸ್ಟ್'ನ ಬ್ಯಾಟಿಂಗ್'ನಲ್ಲಿ 70 ಹಾಗೂ ಬೌಲಿಂಗ್'ನಲ್ಲಿ 7 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನವದೆಹಲಿ(ಆ.08): ಲಂಕಾ ವಿರುದ್ಧದ ಮೂರನೇ ಟೆಸ್ಟ್'ಗೆ ನಿಷೇಧ ಹೇರಿದ್ದರೂ, ಭಾರತ ತಂಡದ ಯಶಸ್ವಿ ಆಲ್ರೌಂಡರ್ ರವೀಂದ್ರ ಜಡೇಜಾ ಪಾಲಿಗೆ ಇದೀಗ ಶುಭಶುದ್ದಿಯೊಂದು ಹೊರಬಿದ್ದಿದೆ. ಐಸಿಸಿ ಬಿಡುಗಡೆ ಮಾಡಿದ ನೂತನ ಶ್ರೇಯಾಂಕ ಪಟ್ಟಿಯ ಆಲ್ರೌಂಡರ್ ವಿಭಾಗದಲ್ಲಿ ಸೌರಾಷ್ಟ್ರದ ಎಡಗೈ ಆಟಗಾರ ಚೊಚ್ಚಲ ಬಾರಿಗೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಈಗಾಗಲೇ ನಂ.1 ಬೌಲರ್ ಎನಿಸಿಕೊಂಡಿರುವ 28 ವರ್ಷದ ಜಡೇಜಾ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್-ಹಸನ್ ಅವರನ್ನು ಹಿಂದಿಕ್ಕಿ ಆಲ್ರೌಂಡ್ ವಿಭಾಗದಲ್ಲಿ ಅಗ್ರ ಸ್ಥಾನಕ್ಕೆ ದಾಪುಗಾಲಿಟ್ಟಿದ್ದಾರೆ.

ತಾವಾಡಿದ 32ನೇ ಟೆಸ್ಟ್'ನಲ್ಲೇ 150 ವಿಕೆಟ್ ಕಿತ್ತ ಸಾಧನೆ ಮಾಡಿರುವ ಜಡ್ಡು, ದ್ವಿತೀಯ ಟೆಸ್ಟ್'ನ ಬ್ಯಾಟಿಂಗ್'ನಲ್ಲಿ 70 ಹಾಗೂ ಬೌಲಿಂಗ್'ನಲ್ಲಿ 7 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 24 ತಿಂಗಳಲ್ಲಿ ಎರಡನೇ ಬಾರಿಗೆ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಒಂದು ಟೆಸ್ಟ್ ಪಂದ್ಯದ ಮಟ್ಟಿಗೆ ಜಡೇಜಾಗೆ ಐಸಿಸಿ ನಿಷೇಧ ಹೇರಲಾಗಿದೆ.

ಇನ್ನು ಭಾರತದ ಬ್ಯಾಟ್ಸ್'ಮನ್'ಗಳು ಕೂಡಾ ಟೆಸ್ಟ್ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದಾರೆ. ಟೆಸ್ಟ್ ಕ್ರಿಕೆಟ್'ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ. ಪೂಜಾರ ಬ್ಯಾಟಿಂಗ್ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ರಹಾನೆ 5ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.