ಸ್ಟಾರ್ ಆಟಗಾರರ ಅನುಪಸ್ಥಿತಿ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಕಳೆಗುಂದಿಸಲಿದೆಯೇ ಎನ್ನುವ ಚಿಂತೆ ಕ್ರಿಕೆಟ್ ಅಭಿಮಾನಿಗಳದ್ದು.
ಬೆಂಗಳೂರು(ಮಾ.31): ಭಾರತ ತಂಡದ ಪ್ರಮುಖ ಆಧಾರಸ್ತಂಭಗಳೆಂದು ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್, ಮುರಳಿ ವಿಜಯ್, ಕೆ.ಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ರವೀಂದ್ರ ಜಡೇಜಾ, ಉಮೇಶ್ ಯಾದವ್ ಟೂರ್ನಿಯ ಕೆಲ ಪಂದ್ಯಗಳಿಗೆ ಹೊರಬೀಳುವ ಸಾಧ್ಯತೆಯಿದೆ ಎಂದು ವಿಸ್ಡನ್ ಇಂಡಿಯಾ ವರದಿ ಮಾಡಿದೆ.
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿದ್ದ ವಿಜಯ್ ಅವರು ಇತ್ತೀಚೆಗಷ್ಟೇ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಇನ್ನು ಐಪಿಎಲ್ ಆರಂಭದಿಂದಲೂ ಧೋನಿ ನಾಯಕತ್ವದಲ್ಲಿ ಐಪಿಎಲ್ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್, ಈ ಬಾರಿ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಡುವ ಸಾಧ್ಯತೆಯಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಅಶ್ವಿನ್ ಐಪಿಎಲ್ 10 ಆವೃತ್ತಿಯಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಇನ್ನು ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದ ರವೀಂದ್ರ ಜಡೇಜಾ ಕೂಡಾ ಮೊದಲ ಮೂರು ವಾರಗಳ ಕಾಲ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗುಜರಾತ್ ಲಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿರುವ ಜಡೇಜಾ ಕೆಲವಾರ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದಾರೆ. ಇದರ ಜೊತೆಗೆ ಕೊಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬೌಲರ್ ಉಮೇಶ್ ಯಾದವ್ ಕೂಡಾ ಮೊದಲ ಮೂರುವಾರಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ನಿಖರವಾದ ಲೈನ್ ಹಾಗೂ ಲೆಂಗ್ತ್ ಮೂಲಕ ಆಸೀಸ್ ಬ್ಯಾಟ್ಸ್'ಮನ್'ಗಳನ್ನು ಕಂಗೆಡಿಸಿದ್ದ ಉಮೇಶ್ ಯಾದವ್ ಕೆಲಪಂದ್ಯಗಳ ಮಟ್ಟಿಗೆ ಕೆಕೆಆರ್ ತಂಡದಿಂದ ಹೊರಗುಳಿಯುವುದು ಗೌತಮ್ ಪಡೆಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಗಲಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಆರ್'ಸಿಬಿ ತಂಡದ ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ ಭುಜದ ನೋವಿನಿಂದಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ವಿರಾಟ್ ಕೊಹ್ಲಿ ಕೂಡ ಆರಂಭದ ಕೆಲಪಂದ್ಯಗಳ ಮಟ್ಟಿಗೆ ಗೈರಾಗಲಿದ್ದಾರೆ.
ಸ್ಟಾರ್ ಆಟಗಾರರ ಅನುಪಸ್ಥಿತಿ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಕಳೆಗುಂದಿಸಲಿದೆಯೇ ಎನ್ನುವ ಚಿಂತೆ ಕ್ರಿಕೆಟ್ ಅಭಿಮಾನಿಗಳದ್ದು.
