ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಅಗತ್ಯ ವಿಶ್ರಾಂತಿ ಸಿಗುವಂತೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ರೂಪಿಸಬೇಕು ಎಂದು ಶಾಸ್ತ್ರಿ ಕೇಳಿಕೊಂಡಿದ್ದಾರೆ.

ನವದೆಹಲಿ(ಸೆ.10): ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ, ಭಾರತೀಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಬೇಕು ಎಂದು ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ.

ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಅಗತ್ಯ ವಿಶ್ರಾಂತಿ ಸಿಗುವಂತೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ರೂಪಿಸಬೇಕು ಎಂದು ಶಾಸ್ತ್ರಿ ಕೇಳಿಕೊಂಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಹಾಗೂ ಬಿಸಿಸಿಐ ಸಿಇಓ ರಾಹುಲ್ ಜೊಹ್ರಿ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಶಾಸ್ತ್ರಿ, ತಮ್ಮ ಮನವಿ ಸಲ್ಲಿಸಿದ್ದಾರೆ. ಶ್ರೀಲಂಕಾ ಪ್ರವಾಸದಿಂದ ಈಗಷ್ಟೇ ವಾಪಸಾಗಿರುವ ತಂಡ, ಸೆಪ್ಟೆಂಬರ್ 17ರಿಂದ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್'ಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಕನಿಷ್ಠ 2-3 ದಿನ ಮುಂಚಿತವಾಗಿಯೇ ಆಟಗಾರರು ಅಭ್ಯಾಸ ಆರಂಭಿಸಲಿದ್ದಾರೆ. ಆಸೀಸ್ ವಿರುದ್ಧ 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಭಾರತ ಆಡಲಿದೆ.

‘ಈ ರೀತಿಯ ವೇಳಾಪಟ್ಟಿ ಆಟಗಾರರು ಚೇತರಿಸಿಕೊಳ್ಳಲು ಕಡಿಮೆ ಸಮಯ ನೀಡುತ್ತದೆ. ಕೇವಲ ಪಂದ್ಯಗಳು ಮಾತ್ರವಲ್ಲ, ಪ್ರಯಾಣ, ಅಭ್ಯಾಸ ಕೂಡ ಆಟಗಾರರ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡುತ್ತ ದೆ’ ಎಂದು ಶಾಸ್ತ್ರಿ ಹೇಳಿದ್ದಾರೆ. ‘ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತನ್ನ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಬಿಸಿಸಿಐ ಕೂಡ ಅದೇ ಮಾದರಿ ಅನುಸರಿಸಬೇಕು’ ಎಂದು ಶಾಸ್ತ್ರಿ ಮನವಿ ಮಾಡಿದ್ದಾರೆ.